ಕೇಂದ್ರ ಸರಕಾರದ ಭಾರತ್ಮಾಲಾ ಹೈವೇ ಯೋಜನೆಗಳ ಗುತ್ತಿಗೆ ನೀಡಿಕೆಯಲ್ಲಿ ಅವ್ಯವಹಾರ: ಸಿಎಜಿ

ಭಾರತ್ಮಾಲಾ ಹೈವೇ ಯೋಜನೆ. |Photo: PTI
ಹೊಸದಿಲ್ಲಿ: ಕೇಂದ್ರ ಸರಕಾರದ ಭಾರತ್ಮಾಲಾ ಹೈವೇ ಯೋಜನೆಗಳ ಗುತ್ತಿಗೆ ನೀಡಿಕೆಯಲ್ಲಿ ಅವ್ಯವಹಾರಗಳಾಗಿರುವುದನ್ನು ಭಾರತದ ಮಹಾ ಲೆಕ್ಕಪರಿಶೋಧಕರು (ಸಿಎಜಿ) ಪತ್ತೆಹಚ್ಚಿದ್ದಾರೆ.
ಲೆಕ್ಕ ಪರಿಶೋಧನೆಯ ವೇಳೆ, 2017-18ರಿಂದ 2020-21ರವರೆಗಿನ ಅವಧಿಯಲ್ಲಿ ಜಾರಿಗೊಳಿಸಲಾದ 66 ಯೋಜನೆಗಳ ಹಣಕಾಸು ನಿರ್ವಹಣೆ, ಅನುಷ್ಠಾನ ಮತ್ತು ನಿಗಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಯೋಜನೆಗಳನ್ನು ಭಾರತ್ಮಾಲಾ ಪರಿಯೋಜನೆಯ ಮೊದಲನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು.
ಟೆಂಡರ್ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಯೋಜನೆಗಳ ಗುತ್ತಿಗೆಗಳನ್ನು ನೀಡಲಾಗಿದ್ದು, ಅವ್ಯವಹಾರಗಳು ನಡೆದಿವೆ ಎಂದು ಸಿಎಜಿ ತಿಳಿಸಿದೆ. ಕೆಲವು ಪ್ರಕರಣಗಳಲ್ಲಿ, ಗುತ್ತಿಗೆದಾರನು ತನ್ನ ಬದ್ಧತೆಗಳನ್ನು ಸಂಪೂರ್ಣವಾಗಿ ಪೂರೈಸಿಲ್ಲ ಅಥವಾ ಗುತಿಗೆದಾರನನ್ನು ಸುಳ್ಳು ದಾಖಲೆಗಳ ಆಧಾರದಲ್ಲಿ ಆರಿಸಲಾಗಿದೆ ಎನ್ನುವುದನ್ನು ಸಿಎಜಿ ಕಂಡುಕೊಂಡಿದೆ.
ವಿವರವಾದ ಯೋಜನಾ ವರದಿಯ ಅನುಪಸ್ಥಿತಿಯಲ್ಲಿ ಅಥವಾ ತಪ್ಪು ಯೋಜನಾ ವರದಿಯ ಆಧಾರದಲ್ಲಿ ಗುತ್ತಿಗೆಗಳನ್ನು ನೀಡಲಾಗಿದೆ ಎಂದಿದೆ.
ಅಗತ್ಯ ಜಮೀನು ಮತ್ತು ಅರಣ್ಯ ಇಲಾಖೆಯ ಅನುಮತಿ ಲಭ್ಯತೆಯನ್ನು ನೋಡದೆ ಯೋಜನೆಗಳ ಗುತ್ತಿಗೆಗಳನ್ನು ನೀಡಲಾಗುತ್ತಿದೆ. ಇದರಿಂದಾಗಿ ಯೋಜನೆಗಳ ಆರಂಭ ಮತ್ತು ಮುಕ್ತಾಯದಲ್ಲಿ ವಿಳಂಬವಾಗುತ್ತಿದೆ ಎಂದು ಸಿಎಜಿ ಬೆಟ್ಟು ಮಾಡಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್- ಈ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಸಂಸ್ಥೆಗಳಾಗಿವೆ.







