ಕೆಂಪು ಕೋಟೆ ಬಳಿ ಸ್ಫೋಟಿಸಿದ ಕಾರಿನ ಚಾಲಕನಿಗೆ ಸ್ಫೋಟಕ ದಾಸ್ತಾನು ಪ್ರಕರಣದ ಆರೋಪಿಗಳ ಜೊತೆ ನಂಟು?

Photo: PTI
ಹೊಸದಿಲ್ಲಿ,ನ.11: ಕೆಂಪುಕೋಟೆ ಸಮೀಪ ಸೋಮವಾರ ಸ್ಪೋಟಗೊಂಡ ಕಾರಿನ ಚಾಲಕನೆಂದು ಶಂಕಿಸಲಾದ ಡಾ. ಉಮರ್ ಉನ್ ನಬಿ, ಫರೀದಾಬಾದ್ ಹಾಗೂ ಫತೇಹಪುರ ಟಾಗಾ ಗ್ರಾಮಗಳಲ್ಲಿ ಪತ್ತೆಯಾದ 2900 ಕೆ.ಜಿ.ದಹನಕಾರಕ ಹಾಗೂ ಸ್ಫೋಟಕ ಸಾಮಾಗ್ರಿಗಳ ಪ್ರಕರಣದ ಜೊತೆ ನಂಟು ಹೊಂದಿದ್ದಾನೆಂದು ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ. ಡಾ. ಉಮರ್ ಉನ್ ನಬಿಯು ಫರೀದಾಬಾದ್ ನಲ್ಲಿರುವ ತನ್ನ ಬಾಡಿಗೆ ಮನೆಯಿಂದ ಸ್ಫೋಟಕ ಸಾಮಾಗ್ರಿಗಳನ್ನು ದಿಲ್ಲಿಗೆ ಸಾಗಾಟ ಮಾಡಿದ್ದನೆಂದು ಅವರು ಹೇಳಿದ್ದಾರೆ.
ಮೂಲತಃ ಪುಲ್ವಾಮ ನಿವಾಸಿಯಾದ ಡಾ. ಉಮರ್ ಇತ್ತೀಚೆಗೆ ಜಮ್ಮುಕಾಶ್ಮೀರದಲ್ಲಿ ಬಂಧಿತರಾದ ಇಬ್ಬರು ವೈದ್ಯರ ಜೊತೆ ಸಂಪರ್ಕದಲ್ಲಿದ್ದನೆನ್ನಲಾಗಿದೆ. ಸೋಮವಾರ ಸಂಜೆ ಆತ ಚಲಾಯಿಸುತ್ತಿದ್ದ ಬಿಳಿ ಬಣ್ಣದ ಹುಂಡೈ ಐ20 ಕಾರು, ಸಿಗ್ನಲ್ ಸಮೀಪ ನಿಧಾನವಾಗಿ ಚಲಿಸುತ್ತಿದ್ದಾಗ ಸ್ಫೋಟಿಸಿತು ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸ್ಫೋಟದ ತೀವ್ರತೆಯಿಂದಾಗಿ ಆಸುಪಾಸಿನ ವಾಹನಗಳು ಬೆಂಕಿಯ ಜ್ವಾಲೆಗೆ ಆಹುತಿಯಾಗಿದ್ದು, 13 ಮಂದಿ ಸಾವನ್ನಪ್ಪಿದರು ಹಾಗೂ ಹಲವರು ಗಾಯಗೊಂಡರು.
ಕಳೆದ ಮೂರು ವರ್ಷಗಳಿಂದ ಫರೀದಾಬಾದ್ ನ ಅಲ್ಫಲಹ್ ವೈದ್ಯಕೀಯ ಕಾಲೇಜ್ ನಲ್ಲಿ ವೈದ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಕಳೆದ ವಾರ ಆನಂತನಾಗ್ ನ ಸರಕಾರಿ ಮೆಡಿಕಲ್ ಕಾಲೇಜ್ ನ ನಿವಾಸಿಯಾದ ಅದೀಲ್ ಅಹ್ಮದ್ ರಾಥೇರ್ ಜೊತೆಗೂಡಿ ಈ ಸಂಚನ್ನು ರೂಪಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಉಮರ್ ನ ಸಹೋದರರಾದ ಉಮರ್ ರಶೀದ್ ಹಾಗೂ ಆಮೀರ್ ರಶೀದ್ ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ರಶೀದ್ ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಆಗಿದ್ದರೆ, ರಶೀದ್ ಪ್ಲಂಬರ್ ಎಂದು ತಿಳಿದುಬಂದಿದೆ.
ದಿಲ್ಲಿ ಕಾರ್ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಫರೀದಾಬಾದ್ ನ ಅಲ್-ಫಲಾಹ್ ವಿಶ್ವವಿದ್ಯಾನಿಲಯದ ಮೂವರು ವಿದ್ಯಾರ್ಥಿಗಳನ್ನು ಮಂಗಳವಾರ ಜಮ್ಮುಕಾಶ್ಮೀರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಉಮರ್ ಹಾಗೂ ಆತನ ಸಹಚರನಾದ ಪುಲ್ವಾಮಾದ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ ಡಾ. ಮುಝಮ್ಮಿಲ್ ಶಕೀಲ್ ರ ಚಲನವಲಗಳನ್ನು ಜಾಡನ್ನು ತಿಳಿಯಲು ಫರೀದಾಬಾದ್ ಪೊಲೀಸರು ವಿವಿಧ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಹರ್ಯಾಣದ ಫರೀದಾಬಾದ್ ನಲ್ಲಿರುವ ಎರಡು ವಸತಿ ಕಟ್ಟಡಗಳಿಂದ 3 ಸಾವಿರ ಕೆ.ಜಿ. ಸ್ಫೋಟಕವಸ್ತುಗಳನ್ನು ಜಮ್ಮುಕಾಶ್ಮೀರ ಪೊಲೀಸರು ಸೋಮವಾರ ವಶಕ್ಕೆ ತೆಗೆದುಕೊಂಡ ಕೆಲವೇ ತಾಸುಗಳ ಬಳಿಕ ದಿಲ್ಲಿಯಲ್ಲಿ ಕಾರ್ ಸ್ಫೋಟ ನಡೆದಿದೆ.
ಫರೀದಾಬಾದ್ ನಲ್ಲಿ ಸೋಮವಾರ ವೈದ್ಯರಾದ ಡಾ. ಮುಝಮ್ಮಿಲ್ ಶಕೀಲ್ ಹಾಗೂ ಡಾ.ಅದಿಲ್ ರಾಥೆರ್ ರನ್ನು ಸೋಮವಾರ ಬಂಧಿಸಿದ ಜಮ್ಮಕಾಶ್ಮೀರ ಪೊಲೀಸರು ಅವರಿಂದ ಅಮೋನಿಯಂ ನೈಟ್ರೇಟ್ ರಾಸಾಯನಿಕ ಸೇರಿದಂತೆ ಸ್ಫೋಟಕವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದರು.







