ಇರಾನಿನ ಫೋರ್ಡೊ ಪರಮಾಣು ಪ್ರಯೋಗಾಲಯದ ಮೇಲೆ ಇಸ್ರೇಲ್ನಿಂದ ಮತ್ತೆ ದಾಳಿ

PC : PTI
ಟೆಲ್ ಅವೀವ್ (ಇಸ್ರೇಲ್): ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು ಸೋಮವಾರ 11ನೇ ದಿನವನ್ನು ಪ್ರವೇಶಿಸಿದ್ದು, ಫೋರ್ಡೊದಲ್ಲಿರುವ ಭೂಗತ ಪರಮಾಣು ಪ್ರಯೋಗಾಲಯ ಸೇರಿದಂತೆ ಇರಾನ್ನ ಹಲವಾರು ನೆಲೆಗಳ ಮೇಲೆ ಇಸ್ರೇಲ್ ಸರಣಿ ದಾಳಿಗಳನ್ನು ನಡೆಸಿದೆ.
ಇರಾನ್ ರಾಜಧಾನಿ ಟೆಹರಾನ್ನಲ್ಲಿರುವ ಎವಿನ್ ಜೈಲು ಮತ್ತು ಅರೆಸೈನಿಕ ಪಡೆ ರೆವಲೂಶನರಿ ಗಾರ್ಡ್ಸ್ನ ಪ್ರಧಾನ ಕೇಂದ್ರ ಸೇರಿದಂತೆ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ನ ರಕ್ಷಣಾ ಸಚಿವಾಲಯ ತಿಳಿಸಿದೆ.
ಅಮೆರಿಕ ರವಿವಾರ ಫೋರ್ಡೊ ಸೇರಿದಂತೆ ಇರಾನ್ನ ಮೂರು ಪರಮಾಣು ಪ್ರಯೋಗಾಲಯಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಇವುಗಳ ಪೈಕಿ ಫೋರ್ಡೊದಲ್ಲಿರುವ ಭೂಗತ ಯುರೇನಿಯಮ್ ಸಂವರ್ಧನಾ ಪ್ರಯೋಗಾಲಯದ ಮೇಲೆ ಸೋಮವಾರ ಇನ್ನೊಮ್ಮೆ ತಾನು ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ.
ದಾಳಿಗೆ ಒಳಗಾಗಿರುವ ಎವಿನ್ ಜೈಲಿನಲ್ಲಿ ಅವಳಿ ರಾಷ್ಟ್ರೀಯತೆ ಹೊಂದಿದವರು ಮತ್ತು ಪಾಶ್ಚಾತ್ಯ ಕೈದಿಗಳನ್ನು ಇಡಲಾಗುತ್ತಿತ್ತು. ಈ ಜೈಲಿನ ಮೇಲೆ ನಡೆದ ದಾಳಿಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಇಸ್ರೇಲ್ ದಾಳಿಯಿಂದಾಗಿ ಜೈಲಿನ ಕೆಲವು ಭಾಗಗಳಿಗೆ ಹಾನಿಯಾಗಿವೆ ಎಂದು ಇರಾನ್ನ ‘ಜುಡಿಶಿಯರಿ ಮಿಝಾನ್’ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ, ಪರಿಸ್ಥಿತಿ ಭದ್ರತಾ ಪಡೆಗಳ ನಿಯಂತ್ರಣದಲ್ಲಿದೆ ಎಂದು ಅದು ಹೇಳಿದೆ.
ಕರಾಜ್ನಲ್ಲಿರುವ ರೆವಲೂಶನರಿ ಗಾರ್ಡ್ಸ್ನ ಭದ್ರತಾ ಕೇಂದ್ರ, ಟೆಹರಾನ್ನಲ್ಲಿರುವ ‘ಫೆಲೆಸ್ತೀನ್ ಚೌಕ’ ಮತ್ತು ಅರೆಸೈನಿಕ ಪಡೆ ಬಸಿಜ್ ವೋಲಂಟಿಯರ್ ಕಾರ್ಪ್ಸ್ನ ಕಟ್ಟಡದ ಮೇಲೂ ಇಸ್ರೇಲ್ ದಾಳಿ ನಡೆಸಿದೆ ಎಂದು ‘ಅಸೋಸಿಯೇಟಡ್ ಪ್ರೆಸ್’ ವರದಿ ಮಾಡಿದೆ.
‘‘ಇಸ್ರೇಲ್ನ ಮನೆಗಳ ಮೇಲೆ ದಾಳಿ ನಡೆಸಿರುವುದಕ್ಕಾಗಿ ಇರಾನ್ ಸರ್ವಾಧಿಕಾರಿಯನ್ನು ಸಂಪೂರ್ಣ ಬಲವೊಂದಿಗೆ ಶಿಕ್ಷಿಸಲಾಗುವುದು’’ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ಹೇಳಿದೆ.
ಟೆಹರಾನ್ನ ವಿದ್ಯುತ್ ಪೂರೈಕೆ ವ್ಯವಸ್ಥೆಯ ಮೇಲೂ ಇಸ್ರೇಲ್ ದಾಳಿ ನಡೆಸಿದೆ, ಇದರಿಂದಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ಕೂಡ ಸೋಮವಾರ ಇಸ್ರೇಲ್ನತ್ತ ಕ್ಷಿಪಣಿಗಳನ್ನು ಹಾರಿಸಿದೆ.







