ISRO ಮಹತ್ವದ ಸಾಧನೆ | ವಿದೇಶಿ ಉಪಗ್ರಹ ಹೊತ್ತ ಅತ್ಯಂತ ಭಾರವಾದ ರಾಕೆಟ್ ಯಶಸ್ವಿ ಉಡಾವಣೆ

Photo credit: X/ANI
ಶ್ರೀಹರಿಕೋಟಾ: ಬಾಹುಬಲಿ LVM3 ಮೂಲಕ ವಿದೇಶಿ ಉಪಗ್ರಹ ಹೊತ್ತ ಅತ್ಯಂತ ಭಾರವಾದ ರಾಕೆಟ್ ಯಶಸ್ವಿ ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಭಾರತೀಯ ನೆಲದಿಂದ ಇದುವರೆಗೆ ಉಡಾವಣೆಗೊಂಡ ಅತ್ಯಂತ ಭಾರವಾದ ವಿದೇಶಿ ಉಪಗ್ರಹವನ್ನು ಹೊತ್ತೊಯ್ದ ‘ಬಾಹುಬಲಿ’ LVM3 ರಾಕೆಟ್ ದೋಷರಹಿತವಾಗಿ ಕಕ್ಷೆ ಪ್ರವೇಶಿಸಿದೆ.
ಡಿಸೆಂಬರ್ 24, 2025ರಂದು ಬೆಳಿಗ್ಗೆ 8.54ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಎರಡನೇ ಉಡಾವಣಾ ಪ್ಯಾಡ್ನಿಂದ LVM3–M6 ರಾಕೆಟ್ ಗಗನಕ್ಕೆ ಏರಿತು. ಸುಮಾರು 640 ಟನ್ ತೂಕದ ಈ ದೈತ್ಯ ಉಡಾವಣಾ ವಾಹನವು 6.5 ಟನ್ ತೂಕದ ಸಂವಹನ ಉಪಗ್ರಹ ‘ಬ್ಲೂಬರ್ಡ್ ಬ್ಲಾಕ್–2’ ಅನ್ನು ಹೊತ್ತೊಯ್ದಿತು.
ಅಮೆರಿಕದ ಖಾಸಗಿ ಸಂಸ್ಥೆಗೆ ಸೇರಿದ ಈ ಉಪಗ್ರಹವನ್ನು 520ರಿಂದ 600 ಕಿಲೋಮೀಟರ್ ಎತ್ತರದ ಕಡಿಮೆ ಭೂಮಿಯ ಕಕ್ಷೆಗೆ ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ನಿಯೋಜಿಸಲಾಯಿತು. ಇದು LVM3 ರಾಕೆಟ್ನ ಆರನೇ ಕಾರ್ಯಾಚರಣಾ ಹಾರಾಟವಾಗಿದ್ದು, ಇಸ್ರೋದ 101ನೇ ಯಶಸ್ವಿ ಕಕ್ಷಾ ಮಿಷನ್ ಆಗಿದೆ.
ಎರಡು S200 ಘನ ಬೂಸ್ಟರ್ ಗಳು, L110 ದ್ರವ ಇಂಧನ ಕೋರ್ ಹಂತ ಹಾಗೂ C25 ಕ್ರಯೋಜೆನಿಕ್ ಮೇಲ್ಭಾಗವನ್ನು ಒಳಗೊಂಡ ಮೂರು ಹಂತದ ಈ ರಾಕೆಟ್ನ ಉಡಾವಣೆಯನ್ನು ದೇಶ–ವಿದೇಶಗಳಲ್ಲಿ ಲಕ್ಷಾಂತರ ಮಂದಿ ನೇರ ಪ್ರಸಾರದಲ್ಲಿ ವೀಕ್ಷಿಸಿದರು. ವಾಣಿಜ್ಯ ಉಡಾವಣೆಯ ಜವಾಬ್ದಾರಿಯನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ವಹಿಸಿಕೊಂಡಿತ್ತು.
ಉಡಾವಣೆಯ ನಂತರ ಮಾತನಾಡಿದ ISRO ಮುಖ್ಯಸ್ಥರು, “ಭಾರತದ ನೆಲದಿಂದ ಇದುವರೆಗೆ ಉಡಾವಣೆಗೊಂಡ ಅತ್ಯಂತ ಭಾರವಾದ ಉಪಗ್ರಹವನ್ನು ಕಕ್ಷೆಗೆ ತಳ್ಳಿರುವುದು ದೇಶದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಹೊಸ ಮೈಲಿಗಲ್ಲು. LVM3 ಅತ್ಯಂತ ನಿಖರ ಕಕ್ಷಾ ಕಾರ್ಯಕ್ಷಮತೆಯನ್ನು ತೋರಿದ್ದು, ಜಾಗತಿಕ ಬಾಹ್ಯಾಕಾಶ ವಲಯದಲ್ಲಿ ಭಾರತದ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಬಲಪಡಿಸಿದೆ” ಎಂದು ಹೇಳಿದರು.







