ಕಾಂಗ್ರೆಸ್ ಸಂಸದ ಧೀರಜ್ ಸಾಹು ಮೇಲೆ ಐಟಿ ದಾಳಿ ; 318 ಕೋಟಿ ರೂ. ನಗದು ವಶಕ್ಕೆ, ಮುಂದುವರೆದ ಎಣಿಕೆ!
Photo: PTI
ಹೊಸದಿಲ್ಲಿ: ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರಿಗೆ ಸೇರಿದ ಆವರಣಗಳ ಮೇಲಿನ ಆದಾಯ ತೆರಿಗೆ (ಐಟಿ) ದಾಳಿಗಳಲ್ಲಿ ವಶಪಡಿಸಿಕೊಳ್ಳಲಾಗಿರುವ ನಗದು ಹಣದ ಒಟ್ಟು ಮೊತ್ತ 318 ಕೋಟಿ ರೂ.ಗಳಿಗೆ ತಲುಪಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಗದು ಹಣವನ್ನು ಈ ಹಿಂದೆಂದೂ ವಶಪಡಿಸಿಕೊಳ್ಳಲಾಗಿರಲಿಲ್ಲ. ಹಲವಾರು ಚೀಲಗಳಲ್ಲಿ ತುಂಬಿಟ್ಟಿರುವ ನಗದು ಹಣದ ಎಣಿಕೆ ಈಗಲೂ ಒಡಿಶಾದಲ್ಲಿ ಮುಂದುವರಿದಿದ್ದು, ಒಟ್ಟು ಮೊತ್ತ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.
ಒಡಿಶಾದ ಬೋಲಂಗಿರ್ನಲ್ಲಿರುವ ಎಸ್ ಬಿ ಐ ಶಾಖೆಯಲ್ಲಿ ಹಣದ ಎಣಿಕೆ ನಡೆಯುತ್ತಿದ್ದು, ಮಧ್ಯರಾತ್ರಿಯ ವೇಳೆಗೆ ಎಲ್ಲ ನಗದು ಹಣದ ಎಣಿಕೆ ಪೂರ್ಣಗೊಳ್ಳಲಿದೆ ಎಂದು ಬ್ಯಾಂಕಿನ ಅಧಿಕಾರಿಗಳು ರವಿವಾರ ತಿಳಿಸಿದರು.
ನೋಟುಗಳಿಂದ ತುಂಬಿದ್ದ 176 ಬ್ಯಾಗ್ ಗಳನ್ನು ತಾವು ಸ್ವೀಕರಿಸಿದ್ದು,ಆ ಪೈಕಿ 140 ಚೀಲಗಳಲ್ಲಿಯ ನೋಟುಗಳನ್ನು ಎಣಿಕೆ ಮಾಡಲಾಗಿದೆ. 50 ಬ್ಯಾಂಕ್ ಅಧಿಕಾರಿಗಳು 25 ಯಂತ್ರಗಳನ್ನು ಬಳಸಿ ಹಣವನ್ನು ಎಣಿಕೆ ಮಾಡುತ್ತಿದ್ದಾರೆ ಎಂದು ಎಸ್ ಬಿ ಐನ ಪ್ರಾದೇಶಿಕ ಪ್ರಬಂಧಕ ಭಗತ್ ಬೆಹೆರಾ ಇಂದು ಬೆಳಿಗ್ಗೆ ತಿಳಿಸಿದ್ದರು.
ಬೌಧ್ ಡಿಸ್ಟಿಲರಿ ಪ್ರೈ.ಲಿ. ಅದರ ಪ್ರವರ್ತಕರು ಮತ್ತು ಇತರರ ವಿರುದ್ಧದ ಮ್ಯಾರಥಾನ್ ದಾಳಿಗಳು ರವಿವಾರ ಐದನೇ ದಿನವನ್ನು ಪ್ರವೇಶಿಸಿವೆ. ಆದಾಯ ತೆರಿಗೆ ಇಲಾಖೆಯು ತೆರಿಗೆ ವಂಚನೆ ಮತ್ತು ಲೆಕ್ಕಪುಸ್ತಕಗಳಲ್ಲಿ ದಾಖಲಾಗದ ವಹಿವಾಟುಗಳ ಆರೋಪಗಳಲ್ಲಿ ಡಿ.6ರಂದು ದಾಳಿಗಳನ್ನು ಆರಂಭಿಸಿತ್ತು.
ದೇಶಿ ಮದ್ಯದ ನಗದು ಮಾರಾಟದ ಮೂಲಕ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹವಾಗಿದೆ ಎಂದು ಆದಾಯ ತೆರಿಗೆ ಇಲಾಖೆಯು ಅಂದಾಜಿಸಿದೆ.
ಅತ್ಯಂತ ಹೆಚ್ಚಿನ ನಗದು ಹಣದ ವಶದ ಹಿಂದಿನ ದಾಖಲೆಯು ಕಾನ್ಪುರದ ಉದ್ಯಮಿಯೋರ್ವನ ಹೆಸರಿನಲ್ಲಿತ್ತು. ಆದಾಯ ತೆರಿಗೆ ಅಧಿಕಾರಿಗಳು 2019ರಲ್ಲಿ ನಡೆಸಿದ್ದ ದಾಳಿಯಲ್ಲಿ ಆತನಿಂದ 257 ಕೋಟಿ ರೂ.ನಗದು ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. 2018ರಲ್ಲಿ ಇಲಾಖೆಯು ತಮಿಳುನಾಡಿನಲ್ಲಿ 163 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿತ್ತು.
ಆದಾಯ ತೆರಿಗೆ ಇಲಾಖೆಯು ತಮ್ಮ ಹೇಳಿಕೆಗಳನ್ನು ದಾಖಲಿಸಲು ಕಂಪನಿಯ ಪ್ರಮುಖ ಪ್ರವರ್ತಕರನ್ನು ಶೀಘ್ರವೇ ಕರೆಸಲಿದೆ.
ರಾಂಚಿ ಮತ್ತು ಇತರ ಸ್ಥಳಗಳಲ್ಲಿಯ ಸಾಹುಗೆ ಸಂಬಂಧಿಸಿದ ಆವರಣಗಳಲ್ಲಿಯೂ ಶೋಧ ಕಾರ್ಯಾಚರಣೆ ನಡೆಸಲಾಗಿದೆ, ಆದರೆ ಅವರ ನಿವಾಸದಿಂದ ಏನನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ.
ಈ ನಡುವೆ ಬಿಜೆಪಿಯು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮೌನವನ್ನು ಪ್ರಶ್ನಿಸಿದೆ.
ರಾಹುಲ್ ಗಾಂಧಿಯವರ ಆಪ್ತಮಿತ್ರ ಹಾಗೂ ಸಂಸದ ಧೀರಜ್ ಸಾಹುರ ಕಚೇರಿಗಳಿಂದ ಇಷ್ಟೊಂದು ದೊಡ್ಡ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ರಾಹುಲ್ ಏಕೆ ಸಾಮಾಜಿಕ ಮಾಧ್ಯಮಗಳಲ್ಲಿ ಏನನ್ನೂ ಪೋಸ್ಟ್ ಮಾಡಿಲ್ಲ? ಈ ಬಗ್ಗೆ ಏನನ್ನೂ ಮಾತನಾಡಿಲ್ಲ. ಏಕೆಂದರೆ ಕಾಂಗ್ರೆಸ್ ಯಾವಾಗಲೂ ಭ್ರಷ್ಟಾಚಾರವನ್ನು ಬೆಂಬಲಿಸುತ್ತದೆ ಎಂದು ಕೇಂದ್ರ ಸಚಿವ ಜಿ.ಕಿಶನ ರೆಡ್ಡಿ ರವಿವಾರ ಹೇಳಿದರು.
ಕಾಂಗ್ರೆಸ್ ಪಕ್ಷವು ಸಾಹು ಅವರಿಂದ ಅಂತರವನ್ನು ಕಾಯ್ದುಕೊಂಡಿದೆಯಾದರೂ, ಇಷ್ಟೊಂದು ದೊಡ್ಡ ಮೊತ್ತದ ಹಣ ಎಲ್ಲಿಂದ ಬಂದಿತ್ತು ಎಂಬ ಬಗ್ಗೆ ಅವರಿಂದ ಅಧಿಕೃತ ಸ್ಪಷ್ಟನೆಯನ್ನು ಕೇಳಿದೆ.