ಪೌರತ್ವ ಪ್ರಮಾಣಪತ್ರ ನೀಡುವುದು ಚುನಾವಣಾ ಆಯೋಗದ ಕೆಲಸವಲ್ಲ: ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆಗೆ ಮಾಜಿ ಚುನಾವಣಾ ಆಯುಕ್ತ ಲವಾಸಾ ಆಕ್ಷೇಪ

ಅಶೋಕ್ ಲವಾಸಾ (Photo: PTI)
ಹೊಸದಿಲ್ಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಚುನಾವಣಾ ಆಯೋಗ ನಿರ್ದೇಶಿಸಿದೆ. ಇದರಿಂದಾಗಿ ಸಾವಿರಾರು ಮಂದಿ ಮತದಾರರ ಪಟ್ಟಿಯಿಂದ ಹೊರಗುಳಿಯಬಹುದು ಎಂಬ ಭೀತಿ ವ್ಯಕ್ತವಾಗಿದೆ. ಚುನಾವಣಾ ಆಯೋಗದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ, ಮತದಾರರಿಗೆ ನಾಗರಿಕತ್ವ ಪ್ರಮಾಣ ಪತ್ರ ವಿತರಿಸುವುದು ಭಾರತೀಯ ಚುನಾವಣಾ ಆಯೋಗದ ಕೆಲಸವಲ್ಲ ಎಂದು ಹೇಳಿದ್ದಾರೆ.
ಜೂನ್ 24ರಂದು ಸಂವಿಧಾನದ 326ನೇ ವಿಧಿಯನ್ನು ಉಲ್ಲೇಖಿಸಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದ ಭಾರತೀಯ ಚುನಾವಣಾ ಆಯೋಗ, “ಮತದಾರರ ಪಟ್ಟಿಯಲ್ಲಿ ಯಾರದೇ ಹೆಸರನ್ನು ನೋಂದಾಯಿಸಬೇಕಿದ್ದರೆ, ಆತ/ಆಕೆ ಭಾರತೀಯ ಪ್ರಜೆಯಾಗಿರಬೇಕಾಗುತ್ತದೆ. ಭಾರತದ ನಾಗರಿಕರು ಮಾತ್ರ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ನೋಡಿಕೊಳ್ಳುವ ಸಾಂವಿಧಾನಿಕ ಬಾಧ್ಯತೆ ಚುನಾವಣಾ ಆಯೋಗಕ್ಕಿದೆ” ಎಂದು ಹೇಳಿತ್ತು.
ಈ ಸಂಬಂಧ TNIE ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಲವಾಸಾ, “ನಾಗರಿಕತ್ವ ಕಾಯ್ದೆಯ ಪ್ರಕಾರ, ಯಾವುದೇ ಬಗೆಯ ನಾಗರಿಕತ್ವ ಗುರುತಿನ ಚೀಟಿ ಅಥವಾ ಪ್ರಮಾಣ ಪತ್ರವನ್ನು ವಿತರಿಸುವ ಅಧಿಕಾರ ರಾಜ್ಯ ಅಥವಾ ಸರಕಾರಕ್ಕೆ ಮಾತ್ರವಿದೆ. ಭಾರತೀಯ ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಚುನಾವಣೆಗಳ ಮೇಲುಸ್ತುವಾರಿ ವಹಿಸುವುದು ಮಾತ್ರ ಅದರ ಹೊಣೆಗಾರಿಕೆಯಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ʼಕಳೆದ ಏಳು ದಶಕಗಳಿಂದ ಮತದಾರರ ನೋಂದಣಿ ಒಂದು ನಿರ್ದಿಷ್ಟ ವಿಧಾನದ ಮೂಲಕ ನಡೆಯುತ್ತಿತ್ತು. ಈ ಪ್ರಕ್ರಿಯೆ ನಿಯಮ ವಿರುದ್ಧವಾಗಿದೆ ಎಂದು ಯಾರೂ ಹೇಳಿಲ್ಲ. ಚುನಾವಣೆ ಆಯೋಗವೂ ಹೇಳಿಲ್ಲ. ಆದ್ದರಿಂದ ಇಂದಿನ ಪರಿಸ್ಥಿತಿಯಲ್ಲಿ ಸಂವಿಧಾನದ 326ನೇ ವಿಧಿಯನ್ನು ಉಲ್ಲೇಖಿಸುವುದು ಅಥವಾ ಅನ್ವಯಿಸುವುದು ಸಮಂಜಸವಲ್ಲʼ ಎಂದು ಮಾಜಿ ಚುನಾವಣಾ ಆಯುಕ್ತರು ಹೇಳಿದ್ದಾರೆ.







