ಆಂಧ್ರಪ್ರದೇಶದಲ್ಲಿ 200-250 ಕೋಟಿ ರೂ. ಯೂರಿಯಾ ಹಗರಣ: ಜಗನ್ ರೆಡ್ಡಿ ಆರೋಪ

PC : PTI
ಅಮರಾವತಿ: “ಆಂಧ್ರಪ್ರದೇಶದಲ್ಲಿ ಕೃತಕ ಯೂರಿಯಾ ಅಭಾವ ಸೃಷ್ಟಿಸಲಾಗಿದ್ದು, ಇದರಿಂದ 200-250 ಕೋಟಿ ರೂ. ಹಗರಣ ನಡೆದಿದೆ” ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ವಿರುದ್ಧ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್ಆರ್ಸಿಪಿ ಮುಖ್ಯಸ್ಥ ವೈ.ಎಸ್.ಜಗನ್ ಮೋಹನ್ ರೆಡ್ಡಿ ಆರೋಪಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಗನ್ ಮೋಹನ್ ರೆಡ್ಡಿ, ಮಂಗಳವಾರ ವೈಎಸ್ಆರ್ಸಿಪಿ ಪಕ್ಷದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ಬೆದರಿಕೆ ಒಡ್ಡಿದ್ದಾರೆ ಎಂದು ದೂರಿದರು.
“ರಸಗೊಬ್ಬರವನ್ನು ಕಾಳಸಂತೆಗೆ ವರ್ಗಾಯಿಸಿ, ಕೃತಕ ಅಭಾವ ಸೃಷ್ಟಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಎನ್.ಚಂದ್ರಬಾಬು ನಾಯ್ಡು ಅವರ ಬೆಂಬಲ ಹಾಗೂ ಪ್ರೋತ್ಸಾಹದಿಂದಾಗಿ, ಕಾಳ ಸಂತೆಯಲ್ಲಿ ಇದು 200-250 ಕೋಟಿ ರೂ. ಹಗರಣದ ಸ್ವರೂಪ ಪಡೆದಿದೆ. ಅಕ್ರಮವಾಗಿ ಸಂಪಾದಿಸಲಾಗಿರುವ ಈ ಮೊತ್ತವನ್ನು ಅವರ ಪಕ್ಷದ ಉನ್ನತ ನಾಯಕತ್ವದಿಂದ ತಳ ಹಂತದ ನಾಯಕತ್ವದವರೆಗೆ ಹಂಚಿಕೆ ಮಾಡಲಾಗಿದೆ” ಎಂದು ಜಗನ್ ಮೋಹನ್ ರೆಡ್ಡಿ ಆರೋಪಿಸಿದರು.
ಅಸಮರ್ಪಕ ಬೆಂಬಲ ಬೆಲೆಯಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹಲವಾರು ಪಟ್ಟಿ ಮಾಡಿದ ಬೆಳೆಗಳ ದರಗಳನ್ನು ಅವರು ಹೆಸರಿಸಿದರು. ಈ ಹಿಂದೆ ವೈಎಸ್ಆರ್ಸಿಪಿ ಸರಕಾರವಿದ್ದಾಗ, ಬೆಳೆಗಳ ದರಗಳು ಕುಸಿದಾಗ, ನಮ್ಮ ಸರಕಾರ ಯಾವಾಗಲೂ ರೈತರ ಬೆಂಬಲಕ್ಕೆ ಮಧ್ಯ ಪ್ರವೇಶಿಸುತ್ತಿತ್ತು ಎಂದು ಅವರು ಹೇಳಿದರು.
ನಾಯ್ಡು ಅವರ ಅಡಳಿತದಲ್ಲಿ ಸರಕಾರಿ ಆಸ್ತಿಗಳನ್ನು ಕವಡೆ ಕಾಸಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದೂ ಆರೋಪಿಸಿದ ಜಗನ್ ಮೋಹನ್ ರೆಡ್ಡಿ, ತಮ್ಮ ಮಾತಿಗೆ ನಿದರ್ಶನವಾಗಿ ಪಿಪಿಪಿ ಮಾದರಿಯಡಿ 10 ವೈದ್ಯಕೀಯ ಕಾಲೇಜುಗಳನ್ನು ಅಭಿವೃದ್ಧಿಗೊಳಿಸುವ ನಿರ್ಧಾರವನ್ನು ಉಲ್ಲೇಖಿಸಿದರು.







