ಆಂಧ್ರದಲ್ಲಿ ದೇಶದಲ್ಲೇ ಅತಿ ದೊಡ್ಡ ಚುನಾವಣಾ ಅಕ್ರಮ, ಆದರೆ ರಾಹುಲ್ ಈ ಬಗ್ಗೆ ಮೌನವಾಗಿದ್ದಾರೆ: ಜಗನ್ ರೆಡ್ಡಿ

ಜಗನ್ಮೋಹನ ರೆಡ್ಡಿ | PC : PTI
ಅಮರಾವತಿ,ಆ.13: 2024ರ ಸಾರ್ವತ್ರಿಕ ಚುನಾವಣೆಗಳ ಸಂದರ್ಭ ದೇಶದಲ್ಲಿಯೇ ಅತಿ ದೊಡ್ಡ ಚುನಾವಣಾ ಅಕ್ರಮ ಆಂಧ್ರಪ್ರದೇಶದಲ್ಲಿ ನಡೆದಿತ್ತು ಎಂದು ಬುಧವಾರ ಆರೋಪಿಸಿದ ವೈಎಸ್ಆರ್ಸಿಪಿ ಮುಖ್ಯಸ್ಥರೂ ಆಗಿರುವ ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಅವರು,ಈ ವಿಷಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೌನವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಡೆಪಲ್ಲಿಯಲ್ಲಿನ ವೈಎಸ್ಆರ್ಸಿಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಚಲಾವಣೆಯಾಗಿದ್ದ ಒಟ್ಟು ಮತಗಳ ಪೈಕಿ ಸುಮಾರು 48 ಲಕ್ಷ ಅಥವಾ ಶೇ.12.5ರಷ್ಟು ಮತಗಳು ಅಕ್ರಮವಾಗಿದ್ದವು ಎಂದು ಪ್ರತಿಪಾದಿಸಿದರು.
ದುರದೃಷ್ಟವಶಾತ್ ರಾಹುಲ್ ಗಾಂಧಿಯವರು ಆಂಧ್ರಪ್ರದೇಶದಲ್ಲಿಯ ಚುನಾವಣಾ ಅಕ್ರಮಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೊತೆ ಉತ್ತಮ ಸಂಪರ್ಕ ಹೊಂದಿರುವುದರಿಂದ ಅವರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂದು ಆರೋಪಿಸಿದರು.
ಆಂಧ್ರಪ್ರದೇಶದಲ್ಲಿ ನಡೆದ ಚುನಾವಣಾ ಅಕ್ರಮ ದೇಶದಲ್ಲೇ ದೊಡ್ಡದು. ಮತದಾನ ಮುಗಿದು ಎಣಿಕೆ ಆರಂಭವಾಗುವ ವೇಳೆಗೆ ಮತಗಳಲ್ಲಿನ ಶೇಕಡಾವಾರು ವ್ಯತ್ಯಾಸವು ದೇಶದಲ್ಲೇ ಅತಿ ದೊಡ್ಡದಾಗಿತ್ತು ಎಂದು ರೆಡ್ಡಿ ಆರೋಪಿಸಿದರು.
ಟಿಡಿಪಿ ವರಿಷ್ಠ ಚಂದ್ರಬಾಬು ನಾಯ್ಡು ಬಗ್ಗೆ ನೀವೆಂದಾದರೂ ಮಾತನಾಡಿದ್ದೀರಾ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಮಾಣಿಕಂ ಟಾಗೋರ್ ರನ್ನು ಪ್ರಶ್ನಿಸಿದ ರೆಡ್ಡಿ,ನೀವು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದೀರಿ ಎಂದು ಆರೋಪಿಸಿದರು.
ನಾಯ್ಡು ಬರಿಗಣ್ಣಿಗೆ ಸ್ಪಷ್ಟವಾಗಿ ಗೋಚರವಾಗುವ ಹಲವಾರು ಹಗರಣಗಳಲ್ಲಿ ಭಾಗಿಯಾಗಿದ್ದಾರೆ, ಆದರೆ ಟಾಗೋರ್ ಮಾತನಾಡುವುದಿಲ್ಲ. ಏಕೆಂದರೆ ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಮತ್ತು ಕಾಂಗ್ರೆಸ್ ಹೈಕಮಾಂಡ್ ನಡುವೆ ಉತ್ತಮ ಸಂಬಂಧವಿದೆ ಎಂದು ರೆಡ್ಡಿ ಕಿಡಿಕಾರಿದರು.
ಅಕ್ರಮ ಮದ್ಯದಂಗಡಿಗಳು, ಪರ್ಮಿಟ್ ರೂಮ್ಗಳು, ಮರಳು, ಸ್ಫಟಿಕಶಿಲೆ ಮತ್ತು ಮುರಕಲ್ಲು ಹಗರಣಗಳಂತಹ ಅಕ್ರಮಗಳು ನಡೆದಿದ್ದರೂ ಟಾಗೋರ್ ಮೌನವಾಗಿದ್ದರು ಎಂದೂ ಅವರು ಆಪಾದಿಸಿದರು.
ಚುನಾವಣಾ ಅಕ್ರಮಗಳ ಕುರಿತು ವೈಎಸ್ಆರ್ಸಿಪಿ ನಾಯಕರ ನಿಯೊಗವೊಂದು ಚುನಾವಣಾ ಆಯೋಗವನ್ನು ಭೇಟಿಯಾಗಿದ್ದು, ಆಂಧ್ರಪ್ರದೇಶದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು ಕೈಗೊಳ್ಳುವುದಾಗಿ ಅದು ಭರವಸೆ ನೀಡಿದೆ ಎಂದು ರೆಡ್ಡಿ ತಿಳಿಸಿದರು.
ರೆಡ್ಡಿ ಆರೋಪಗಳಿಗೆ ಕಾಂಗ್ರೆಸ್ ಅಥವಾ ಆಡಳಿತಾರೂಢ ಟಿಡಿಪಿ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.







