ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಗೆ ಮತ್ತೆ 40 ದಿನಗಳ ಪೆರೋಲ್

ಗುರ್ಮೀತ್ ಸಿಂಗ್ (Photo credit: ANI)
ಹೊಸದಿಲ್ಲಿ: ಅತ್ಯಾಚಾರ ಪ್ರಕರಣವೊಂದರಲ್ಲಿ ದೋಷಿ ಎಂದು ಘೋಷಿತವಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಗೆ ಮತ್ತೆ 40 ದಿನಗಳ ಪೆರೋಲ್ ಮಂಜೂರಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸದ್ಯ ಗುರ್ಮೀತ್ ಸಿಂಗ್ ಹರ್ಯಾಣದ ರೋಹ್ಟಕ್ ನಲ್ಲಿರುವ ಸುನಾರಿಯಾ ಜೈಲಿನಲ್ಲಿ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ 40 ದಿನಗಳ ಕಾಲ ಪೆರೋಲ್ ಮಂಜೂರು ಮಾಡಿದ ಕೆಲವೇ ತಿಂಗಳ ಅಂತರದಲ್ಲಿ ಮತ್ತೆ ಪೆರೋಲ್ ಮಂಜೂರಾಗಿದೆ.
ಇದಕ್ಕೂ ಮುನ್ನ, ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ 40 ದಿನಗಳ ಪೆರೋಲ್, ಜನವರಿಯಲ್ಲಿ 30 ದಿನಗಳ ಪೆರೋಲ್ ಹಾಗೂ ಎಪ್ರಿಲ್ ತಿಂಗಳಲ್ಲಿ 21 ದಿನಗಳ ಫರ್ಲೋ ಮಂಜೂರಾಗಿತ್ತು. ಇದರೊಂದಿಗೆ ದಿಲ್ಲಿ ವಿಧಾನಸಭಾ ಚುನಾವಣೆಯ ವೇಳೆ ಹಲವು ಬಾರಿ ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿತ್ತು.
16 ವರ್ಷಗಳ ಹಿಂದೆ ಪತ್ರಕರ್ತರೊಬ್ಬರನ್ನು ಹತ್ಯೆಗೈದ ಆರೋಪದಲ್ಲೂ 2019ರಲ್ಲಿ ಗುರ್ಮೀತ್ ಸಿಂಗ್ ಹಾಗೂ ಇನ್ನಿತರ ಮೂವರನ್ನು ದೋಷಿಗಳೆಂದು ನ್ಯಾಯಾಲಯ ಘೋಷಿಸಿತ್ತು. 2017ರಲ್ಲಿ ದೋಷಿ ಎಂದು ಘೋಷಣೆಯಾದಾಗಿನಿಂದ ಇಲ್ಲಿಯವರೆಗೆ ಆತ ಒಟ್ಟು 14 ಬಾರಿ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಈ ಅವಧಿಯಲ್ಲಿ ಆತ ಬಹುತೇಕ ಬಾರಿ ಉತ್ತರ ಪ್ರದೇಶದ ಬಾಗ್ಪಟ್ ಜಿಲ್ಲೆಯಲ್ಲಿರುವ ಸಚ್ಚಾ ಡೇರಾ ಆಶ್ರಮದಲ್ಲಿ ಉಳಿದುಕೊಂಡಿದ್ದಾನೆ.







