ಮುಂಬೈ:ಮಂದಿರ ಧ್ವಂಸದ ವಿರುದ್ಧ ಜೈನರ ಪ್ರತಿಭಟನೆ, ವಾರ್ಡ್ ಅಧಿಕಾರಿ ವರ್ಗಾವಣೆ

PC : NDTV
ಮುಂಬೈ: ಇಲ್ಲಿಯ ವಿಲೆ ಪಾರ್ಲೆ(ಪೂರ್ವ)ಯ ನೇಮಿನಾಥ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿಯ ಜೈನ ಮಂದಿರವನ್ನು ಅಕ್ರಮ ನಿರ್ಮಾಣ ಎಂದು ಆರೋಪಿಸಿ ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯು ಧ್ವಂಸಗೊಳಿಸಿದ್ದನ್ನು ವಿರೋಧಿಸಿ ಜೈನ ಸಮುದಾಯದ ಸದಸ್ಯರು ಶನಿವಾರ ಮೌನ ಪ್ರತಿಭಟನೆಯನ್ನು ನಡೆಸಿದರು.
ಈಸ್ಟ್ ವಾರ್ಡ್ನ ಉಸ್ತುವಾರಿಯಾಗಿದ್ದ ಸಹಾಯಕ ಆಯುಕ್ತ ನವನಾಥ ಘಾಡ್ಗೆ ಪಾಟೀಲ್ ಅವರ ಮೇಲ್ವಿಚಾರಣೆಯಲ್ಲಿ ಮಂದಿರವನ್ನು ನೆಲಸಮಗೊಳಿಸಲಾಗಿದ್ದು,ಎ.16ರಂದು ಅವರನ್ನು ವರ್ಗಾವಣೆ ಮಾಡಲಾಗಿತ್ತು.
ಬಿಎಂಸಿ ಆಯುಕ್ತ ಭೂಷಣ ಗಗ್ರಾಣಿಯವರು ಘಾಡ್ಗೆ ಪಾಟೀಲ್ ವರ್ಗಾವಣೆಯನ್ನು ದೃಢಪಡಿಸಿದ್ದರೂ,ಅದಕ್ಕೆ ಕಾರಣವನ್ನು ತಿಳಿಸಿಲ್ಲ. ಆದರೆ ಘಾಡ್ಗೆ ಪಾಟೀಲ್ ವರ್ಗಾವಣೆಯು ಮಂದಿರ ಧ್ವಂಸ ಕಾರ್ಯಾಚರಣೆಗೆ ಸಂಬಂಧಿಸಿದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಾಸಕ ಪರಾಗ ಅಲವಣಿ ತಿಳಿಸಿದರು.
‘ನಾವು ನ್ಯಾಯಾಲಯದ ನಿರ್ದೇಶನಗಳಂತೆ ಕಾರ್ಯಾಚರಿಸಿದ್ದೇವೆ ಮತ್ತು ಎಲ್ಲ ಕಾನೂನು ಕಾರ್ಯವಿಧಾನಗಳನ್ನು ಅನುಸರಿಸಿದ್ದೇವೆ’ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಘಾಡ್ಗೆ ಪಾಟೀಲ ತಿಳಿಸಿದರು.
ಶ್ರೀ 1008 ದಿಗಂಬರ ಜೈನ ಮಂದಿರ ಟ್ರಸ್ಟ್ ನಿರ್ವಹಿಸುತ್ತಿದ್ದ ದೇವಸ್ಥಾನವನ್ನು 1962ರಲ್ಲಿ ಅಭಿವೃದ್ಧಿಗೊಳಿಸಲಾಗಿತ್ತು.
ಮಂದಿರದಲ್ಲಿ ಪ್ರಾರ್ಥನೆಗಳು ನಡೆಯುತ್ತಿದ್ದಾಗಲೇ ನಾಲ್ಕು ಬುಲ್ಡೋಜರಗಳು ಆವರಣವನ್ನು ಪ್ರವೇಶಿಸಿದ್ದವು, ಬಿಎಂಸಿಯ ಈ ಕ್ರಮವು ಜೈನ ಸಮುದಾಯದಲ್ಲಿ ಆಕ್ರೋಶವನ್ನುಂಟು ಮಾಡಿದೆ ಎಂದು ಹೇಳಿದ ಪ್ರತಿಭಟನಾಕಾರರಲ್ಲೋರ್ವರಾದ ಮಯೂರ ಜೈನ್,‘ಎ.15ರಂದು ಬಿಎಂಸಿ ನೆಲಸಮ ಕ್ರಮದ ಬಗ್ಗೆ ನೋಟಿಸ್ ಅಂಟಿಸಿತ್ತು. ಆದರೆ ಅವರು ಹಿಂದೆಯೂ ಹಲವಾರು ಬಾರಿ ಹಾಗೆ ಮಾಡಿದ್ದರು ಮತ್ತು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅವರು ನಮ್ಮನ್ನು ಬಲವಂತದಿಂದ ಹೊರಕ್ಕೆ ಹಾಕಿದ್ದರು. ವಿಗ್ರಹಗಳನ್ನು ಸುರಕ್ಷಿತವಾಗಿಡಲೂ ಅವರು ನಮಗೆ ಸಮಯ ನೀಡಿರಲಿಲ್ಲ. ಸಾರ್ವಜನಿಕ ರಜಾದಿನಗಳು ಮುಗಿಯುವುದನ್ನು ನಾವು ಕಾಯುತ್ತಿದ್ದೇವೆ. ಹೀಗಾಗಿ ಕಾರ್ಯಾಚರಣೆಯನ್ನು ತಡೆಹಿಡಿಯುವಂತೆ ನಾವು ಅವರನ್ನು ಕೋರಿಕೊಂಡಿದ್ದೆವು. ಮಂದಿರದ ಟ್ರಸ್ಟಿಗಳು ಬಾಂಬೆ ಹೈಕೋರ್ಟ್ನಿಂದ ನೆಲಸಮದ ವಿರುದ್ಧ ತಡೆಯಾಜ್ಞೆಯನ್ನು ತಂದಿದ್ದರಾದರೂ ಆ ವೇಳೆಗಾಗಲೇ ತುಂಬ ತಡವಾಗಿತ್ತು. ಗೋಡೆಯೊಂದು ಮಾತ್ರ ಧ್ವಂಸಗೊಳ್ಳುವುದು ಬಾಕಿಯಿತ್ತು’ ಎಂದರು.
ನಾವು ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದು ಟ್ರಸ್ಟ್ ನ ಸದಸ್ಯ ಅನಿಲ ಶಾ ತಿಳಿಸಿದರು.
ಹೌಸಿಂಗ್ ಸೊಸೈಟಿಯ ಆವರಣದಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಲು ಬಯಸಿರುವ ಪಕ್ಕದ ರಾಮಕೃಷ್ಣ ಹೋಟೆಲ್ ಮಾಲಿಕರ ಒತ್ತಾಸೆಯ ಮೇರೆಗೆ ಮಂದಿರವನ್ನು ಧ್ವಂಸಗೊಳಿಸಲಾಗಿದೆ. ಹೋಟೆಲ್ ಮಾಲಿಕರು ಸಿಬ್ಬಂದಿಗಳ ವಸತಿಗಾಗಿ ಮಂದಿರದ ಪಕ್ಕದಲ್ಲಿಯೇ ಅಕ್ರಮ ಕಟ್ಟಡ ನಿರ್ಮಿಸಿದ್ದಾರೆ. ಆದರೆ ಬಿಎಂಸಿ ಇದನ್ನು ಕಡೆಗಣಿಸಿದೆ ಎಂದು ಜೈನ ಸಮುದಾಯದ ಸದಸ್ಯ ಪ್ರಶಾಂತ್ ಬಾಜ್ ಆರೋಪಿಸಿದರು.
ಮಂದಿರ ನಿರ್ಮಾಣವನ್ನು ಕ್ರಮಬದ್ಧಗೊಳಿಸಲು ಕೋರಿ ಸಲ್ಲಿಸಲಾಗಿರುವ ಅರ್ಜಿಯು ಬಾಕಿಯಿರುವಾಗಲೇ ಬಿಎಂಸಿ ಅದನ್ನು ನೆಲಸಮಗೊಳಿಸಿದೆ. ಹೋಟೆಲ್ ಮಾಲಿಕರ ಒತ್ತಾಸೆಯ ಮೇರೆಗೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಅವರು ಹೌಸಿಂಗ್ ಸೊಸೈಟಿಯಲ್ಲಿ ಹಲವಾರು ಫ್ಲ್ಯಾಟ್ ಗಳನ್ನು ಹೊಂದಿದ್ದು, ಅಂತಿಮವಾಗಿ ಅದನ್ನು ವಾಣಿಜ್ಯೀಕರಿಸುವ ಉದ್ದೇಶವನ್ನು ಹೊಂದಿದ್ದಾರೆ ಮತ್ತು ಮಂದಿರವಿರುವುದರಿಂದ ಅವರಿಗೆ ಮದ್ಯ ಪರವಾನಿಗೆ ಪಡೆಯಲು ಸಾಧ್ಯವಾಗಿರಲಿಲ್ಲ ಎಂದು ಮಂದಿರ ಟ್ರಸ್ಟ್ ಪರ ವಕೀಲ ಅಶೋಕ ಸರೋಗಿ ಆಪಾದಿಸಿದರು.
ಶನಿವಾರ ಸಂಜೆಯವರೆಗೂ ಬಿಎಂಸಿ ಕಾರ್ಮಿಕರು ಮಂದಿರದ ಅವಶೇಷಗಳನ್ನು ತೆರವುಗೊಳಿಸುವುದನ್ನು ಮುಂದುವರಿಸಿದ್ದರು. ಈ ನಡುವೆ ಜೈನ ಸಮುದಾಯದ ಸದಸ್ಯರು ಅದೇ ಜಾಗದಲ್ಲಿ ಚಪ್ಪರವೊಂದರಡಿ ವಿಗ್ರಹಗಳನ್ನು ಮರುಸ್ಥಾಪಿಸಿದ್ದಾರೆ.







