ಜೈಪುರ | ಡಂಪರ್ ನಿಂದ ಸರಣಿ ಅಪಘಾತ; ಕನಿಷ್ಠ 13 ಜನರ ಮೃತ್ಯು

PC : NDTV
ಜೈಪುರ,ನ.3: ಅತಿವೇಗವಾಗಿ ಚಲಿಸುತ್ತಿದ್ದ ಡಂಪರ್ ಟ್ರಕ್ ಹಲವಾರು ವಾಹನಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 13 ಜನರು ಮೃತಪಟ್ಟು, ಇತರ ಹಲವರು ಗಾಯಗೊಂಡಿರುವ ಭೀಕರ ದುರಂತ ಸೋಮವಾರ ಇಲ್ಲಿ ಸಂಭವಿಸಿದೆ.
ಜನನಿಬಿಡ ಲೋಹಾ ಮಂಡಿ ಪ್ರದೇಶದಲ್ಲಿ ಅಪರಾಹ್ನ ಒಂದು ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು,ಚಾಲಕನ ನಿಯಂತ್ರಣ ತಪ್ಪಿದ ಡಂಪರ್ ಟ್ರಕ್ ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಸೇರಿದಂತೆ ಹಲವಾರು ವಾಹನಗಳಿಗೆ ಅಪ್ಪಳಿಸಿದೆ.
ವಿಭಜಕಕ್ಕೆ ಢಿಕ್ಕಿ ಹೊಡೆದ ನಂತರ ಟ್ರಕ್ ಪಲ್ಟಿಯಾಗಿದ್ದು, ಅದರ ಕೆಳಗೆ ಹಲವಾರು ವಾಹನಗಳು ಅಪ್ಪಚ್ಚಿಯಾಗಿದ್ದವು.
ಅಪಘಾತದಲ್ಲಿ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ ಎಂದು ರಾಜಸ್ಥಾನದ ಆರೋಗ್ಯ ಸಚಿವ ಗಜೇಂದ್ರ ಸಿಂಗ್ ಖಿಮ್ಸರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ಕೆಲವು ಗಾಯಾಳುಗಳನ್ನು ಸ್ಥಳೀಯ ಕನ್ವಾಟಿಯಾ ಆಸ್ಪತ್ರೆಗೆ ಮತ್ತು ಗಂಭೀರ ಗಾಯಾಳುಗಳನ್ನು ಸವಾಯ್ ಮಾನಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಸ್ಥಳೀಯರು ಟ್ರಕ್ ಚಾಲಕನನ್ನು ಹಿಡಿದು ಥಳಿಸಿದ್ದು, ಸ್ಥಳಕ್ಕೆ ಧಾವಿಸಿದ ಪೋಲಿಸರು ಆತನನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ.
ಅಪಘಾತದ ಬಳಿಕ ಪ್ರದೇಶವು ಹಾನಿಗೀಡಾದ ವಾಹನಗಳು ಮತ್ತು ಮೃತದೇಹಗಳಿಂದ ತುಂಬಿತ್ತು.
ಜೈಪುರದಿಂದ ಸುಮಾರು 400 ಕಿ.ಮೀ.ದೂರದ ಮಾತೋಡಾ ಗ್ರಾಮದ ಬಳಿ ಭಾರತ ಮಾಲಾ ಹೆದ್ದಾರಿಯಲ್ಲಿ ಟೆಂಪೊ ಟ್ರಾವೆಲರ್ ನಿಂತಿದ್ದ ಟ್ರೇಲರ್ಗೆ ಢಿಕ್ಕಿ ಹೊಡೆದು ಕನಿಷ್ಠ 15 ಜನರು ಮೃತಪಟ್ಟು, ಮೂವರು ಗಾಯಗೊಂಡ ಕೆಲವೇ ಗಂಟೆಗಳ ಬಳಿಕ ಈ ಅಪಘಾತ ಸಂಭವಿಸಿದೆ ಎಂದು ಪೋಲಿಸರು ತಿಳಿಸಿದರು.







