ಕಠಿಣ ಪ್ರಶ್ನೆಗಳಿಂದ ಗಮನ ಬೇರೆಡೆಗೆ ಸೆಳೆಯಲು ಪ್ರಧಾನಿ ಮೋದಿ ನಿಯೋಗವನ್ನು ಕಳಿಸುತ್ತಿದ್ದಾರೆ: ಜೈರಾಮ್ ರಮೇಶ್

ಜೈರಾಮ್ ರಮೇಶ್ | PC : ANI
ಹೊಸದಿಲ್ಲಿ: ತಮ್ಮ ನಾಯಕತ್ವದ ಕುರಿತು ಹೆಚ್ಚುತ್ತಿರುವ ಟೀಕೆ ಹಾಗೂ ಪ್ರಶ್ನೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಧಾನಿ ನರೇಂದ್ರ ಮೋದಿಯು ದಿಢೀರನೆ ವಿದೇಶಗಳಿಗೆ ವಿವಿಧ ಪಕ್ಷಗಳ ಸಂಸದರ ನಿಯೋಗವನ್ನು ಕಳಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಬುಧವಾರ ಕಾಂಗ್ರೆಸ್ ಪಕ್ಷದ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, "ಪ್ರಧಾನಿ ಮೋದಿ ಅವರ ವರ್ಚಸ್ಸು ಜಾಗತಿಕ ಮಟ್ಟದಲ್ಲಿ ಕಳೆಗುಂದಿರುವ ಸಂದರ್ಭದಲ್ಲಿ ಈ ನಡೆಯನ್ನು ಅನುಸರಿಸಲಾಗಿದೆ" ಎಂದೂ ಅವರು ದೂರಿದ್ದಾರೆ.
ತಮ್ಮ ಈ ಪೋಸ್ಟ್ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಅವರ 34ನೇ ಪುಣ್ಯ ತಿಥಿಯ ಅಂಗವಾಗಿ ಸ್ಮರಿಸಿರುವ ಜೈರಾಮ್ ರಮೇಶ್, "ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಗೆ ಪ್ರತಿ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ವಿವಿಧ ಪಕ್ಷಗಳ ಸಂಸದರನ್ನು ಕಳಿಸುವ ರೂಢಿ 1950ರಿಂದಲೂ ಚಾಲ್ತಿಯಲ್ಲಿತ್ತು. ಅದರೆ, 2014ರಲ್ಲಿ ನರೇಂದ್ರ ಮೋದಿ ಪ್ರಧಾನಿ ಹುದ್ದೆಗೇರಿದ ನಂತರ, ಈ ಸಂಪ್ರದಾಯವನ್ನು ಸ್ಥಗಿತಗೊಳಿಸಲಾಯಿತು" ಎಂದು ಆಪಾದಿಸಿದ್ದಾರೆ.
"ಆದರೀಗ, ಜಾಗತಿಕವಾಗಿ ತಮ್ಮ ವರ್ಚಸ್ಸು ಕುಂದಿರುವುದರಿಂದ ಹತಾಶರಾಗಿರುವ ಹಾಗೂ ಗಂಭೀರ ಪ್ರಶ್ನೆಗಳನ್ನೆದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ದಿಢೀರನೆ ಸರ್ವಪಕ್ಷಗಳ ಸಂಸದರ ನಿಯೋಗವನ್ನು ವಿದೇಶಗಳಿಗೆ ಕಳಿಸುವ ಯೋಜನೆಗೆ ಮರುಜೀವ ನೀಡಿದ್ದಾರೆ" ಎಂದು ಅವರು ಟೀಕಿಸಿದ್ದಾರೆ.







