ಭಾರತ, ಭಾರತೀಯರ ಘನತೆಯನ್ನು ರಕ್ಷಿಸಲು ಮೋದಿ ವಿಫಲ : ಜೈರಾಮ್ ರಮೇಶ್ ವಾಗ್ದಾಳಿ

ಜೈರಾಮ್ ರಮೇಶ್ | PC : PTI
ಹೊಸದಿಲ್ಲಿ : ವಿದೇಶಗಳಲ್ಲಿ ಭಾರತ ಮತ್ತು ಭಾರತೀಯರ ಘನತೆಯನ್ನು ಕಾಪಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಂಗಳವಾರ ಆರೋಪಿಸಿದ್ದಾರೆ.
ಅಮೆರಿಕದ ವಿಮಾನ ನಿಲ್ದಾಣವೊಂದರಲ್ಲಿ ಪೊಲೀಸರು ಭಾರತೀಯ ವಿದ್ಯಾರ್ಥಿಯೊಬ್ಬನನ್ನು ನೆಲಕ್ಕೆ ಉರುಳಿಸಿ ಕೈಕೋಳ ತೊಡಿಸಿದ ಘಟನೆಯ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅವರು ಈ ಆರೋಪ ಮಾಡಿದ್ದಾರೆ.
‘‘ಭಾರತ ಮತ್ತು ಭಾರತೀಯರ ಘನತೆಯನ್ನು ರಕ್ಷಿಸುವಲ್ಲಿ ಮೋದಿ ಸರಕಾರ ನಿರಂತರವಾಗಿ ವಿಫಲವಾಗುತ್ತಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ, ವಿದೇಶಿ ಸರಕಾರವೊಂದರ ಮುಖ್ಯಸ್ಥರು ಭಾರತದ ಅನುಪಸ್ಥಿತಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧವಿರಾಮವನ್ನು ಘೋಷಿಸಿದರು. ತಾನು ಭಾರತದ ಮೇಲೆ ಒತ್ತಡ ಹೇರಿ ಯುದ್ಧವಿರಾಮವನ್ನು ಜಾರಿಗೊಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಂತರವಾಗಿ ಹೇಳಿಕೊಂಡು ಬರುತ್ತಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ, ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯರು ಮತ್ತು ಭಾರತೀಯ ವಿದ್ಯಾರ್ಥಿಗಳನ್ನು ಪದೇ ಪದೇ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಆದರೆ ಪ್ರಧಾನಿ ಮೋದಿ ಮೌನಕ್ಕೆ ಶರಣಾಗಿದ್ದಾರೆ. ಅಥವಾ ಮಾತಾಡುವಷ್ಟು ಧೈರ್ಯವನ್ನು ಒಗ್ಗೂಡಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂಬುದಾಗಿ ಭಾವಿಸಬೇಕಾಗುತ್ತದೆ’’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಾಕಿದ ಸಂದೇಶದಲ್ಲಿ ಜೈರಾಮ್ ರಮೇಶ್ ಬರೆದಿದ್ದಾರೆ.
ಪ್ರಧಾನಿ ಮೋದಿ ತಕ್ಷಣ ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಮಾತನಾಡಿ, ಅಮೆರಿಕದಲ್ಲಿರುವ ಭಾರತೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ನಿಲ್ಲಿಸುವಂತೆ ಮತ್ತು ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳದಂತೆ ಮನವಿ ಮಾಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
‘‘ಅವರು ಭಾರತೀಯ ಪ್ರಧಾನಿ. ಭಾರತ ಮತ್ತು ಭಾರತೀಯರ ಘನತೆಯನ್ನು ರಕ್ಷಿಸುವುದು ಅವರ ಅತ್ಯಂತ ಪ್ರಮುಖ ಜವಾಬ್ದಾರಿಯಾಗಿದೆ. ಪ್ರಧಾನಿ ಮೋದಿ ಟ್ರಂಪ್ ಜೊತೆ ತಕ್ಷಣ ಮಾತನಾಡಿ ಅಮೆರಿಕದಲ್ಲಿರುವ ಭಾರತೀಯರ ಮೇಲೆ ನಡೆಯತ್ತಿರುವ ದೌರ್ಜನ್ಯವನ್ನು ನಿಲ್ಲಿಸುವಂತೆ ಮತ್ತು ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳದಂತೆ ಮನವಿ ಮಾಡಿಕೊಳ್ಳಬೇಕು’’ ಎಂದು ಜೈರಾಮ್ ರಮೇಶ್ ತನ್ನ ಸಂದೇಶದಲ್ಲಿ ಬರೆದಿದ್ದಾರೆ.