ಬಿಜೆಪಿಯ ವೈಫಲ್ಯದಿಂದ ಜನರ ಗಮನ ಬೇರೆಡೆ ಸೆಳೆಯುವ ಯತ್ನ: ಸೋನಂ ವಾಂಗ್ಚುಕ್ ಬಂಧನಕ್ಕೆ ಜೈರಾಮ್ ರಮೇಶ್ ಪ್ರತಿಕ್ರಿಯೆ

ಜೈರಾಮ್ ರಮೇಶ್ | PTI
ಹೊಸದಿಲ್ಲಿ,ಸೆ.26: ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಬಂಧನಕ್ಕೆ ಕಾಂಗ್ರೆಸ್ ಪಕ್ಷವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಜನರ ಜೀವಗಳಿಗೆ ಹಾಗೂ ಆಸ್ತಿಪಾಸ್ತಿಗೆ ಭದ್ರತೆಯನ್ನು ಒದಗಿಸುವಲ್ಲಿ ಕೇಂದ್ರದ ಬಿಜೆಪಿ ಸರಕಾರದ ವೈಫಲ್ಯದಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಹಾಗೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿ ವಾಂಗ್ಚುಕ್ ಅವರ ಬಂಧನವಾಗಿದೆ ಎಂದು ಟೀಕಿಸಿದೆ.
ಕಾಂಗ್ರೆಸ್ ಪಕ್ಷದ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್ನಲ್ಲಿ ಪ್ರಕಟಿಸಿರುವ ಪೋಸ್ಟ್ನಲ್ಲಿ, ಖ್ಯಾತ ಪರಿಸರವಾದಿ ಹಾಗೂ ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.
‘‘ಬಿಜೆಪಿಯು ಹಲವಾರು ವರ್ಷಗಳಿಂದ ಲಡಾಖ್ನ ಜನರನ್ನು ವಂಚಿಸುತ್ತಲೇ ಬಂದಿದೆ. 2020ರ ಲೇಹ್ ಪರ್ವತಮಂಡಳಿ ಚುನಾವಣೆಗಳಲ್ಲಿ ಲಡಾಕ್ ಪ್ರಾಂತಕ್ಕೆ ಆರನೇ ಶೆಡ್ಯೂಲ್ ಸ್ಥಾನಮಾನದ ಭರವಸೆಯನ್ನು ನೀಡಿತ್ತು. ಆದರೆ ಸೇಡಿನಿಂದ ಆ ಭರವಸೆಯಿಂದ ಹಿಂದೆ ಸರಿದಿದೆ’’ ಎಂದು ರಮೇಶ್ ಹೇಳಿದ್ದಾರೆ.
ವಾಂಗ್ಚುಕ್ ಅವರನ್ನು ಬಂಧಿಸುವ ಮೂಲಕ ಮೋದಿ ಸರಕಾರವು ಈ ವಿಷಯಗಳನ್ನು ಮರೆಮಾಚಲು ಅಥವಾ ಹತ್ತಿಕ್ಕಲು ಸಾಧ್ಯವಿಲ್ಲ ’’ ಎಂದು ರಮೇಶ್ ಹೇಳಿದರು.





