ಜೈಸಲ್ಮೇರ್ ನಲ್ಲಿ 43.5 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲು; ಇದು ಸೆಪ್ಟೆಂಬರ್ ನ ಗರಿಷ್ಠ ತಾಪಮಾನ

ಸಾಂದರ್ಭಿಕ ಚಿತ್ರ
ಜೈಪುರ: ಪಶ್ಚಿಮ ರಾಜಸ್ಥಾನದಲ್ಲಿ ಉಷ್ಣ ಮತ್ತು ಒಣ ಹವಾಮಾನ ಪರಿಸ್ಥಿತಿ ಮುಂದುವರಿದಿದ್ದು, ಸೆಪ್ಟೆಂಬರ್ ತಿಂಗಳ ಗರಿಷ್ಠ ತಾಪಮಾನ ಶನಿವಾರ ದಾಖಲಾಗಿದೆ. ಶನಿವಾರ ಜೈಸಲ್ಮೇರ್ ನಲ್ಲಿ 43.5 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದ್ದು, ಇದುವರೆಗೆ ಸೆಪ್ಟೆಂಬರ್ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪಮಾನ ಇದಾಗಿದೆ.
ಈ ಮೊದಲು ಸೆಪ್ಟೆಂಬರ್ ನಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ 43.3 ಡಿಗ್ರಿ ಸೆಲ್ಷಿಯಸ್ ಆಗಿದ್ದು, 1949ರ ಸೆಪ್ಟೆಂಬರ್ 10ರಂದು ದಾಖಲಾಗಿತ್ತು. ಶನಿವಾರ ಜೈಸಲ್ಮೇರ್ನಲ್ಲಿ ದಾಖಲಾದ ಉಷ್ಣಾಂಶ ವಾಡಿಕೆ ತಾಪಮಾನಕ್ಕಿಂತ 6.9 ಡಿಗ್ರಿ ಸೆಲ್ಷಿಯಸ್ನಷ್ಟು ಅಧಿಕ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ರಾಧೇಶ್ಯಾಮ್ ಶರ್ಮಾ ಹೇಳಿದ್ದಾರೆ. ಪಶ್ಚಿಮ ರಾಜಸ್ಥಾನದಲ್ಲಿ ಪ್ರತಿ ಬಿರುಗಾಳಿ ಪ್ರಸರಣ ಈ ಅತ್ಯಧಿಕ ಉಷ್ಣಾಂಶಕ್ಕೆ ಕಾರಣ.
ಮುಂಗಾರು ವಿಮುಖವಾದಾಗ ಈ ಪ್ರದೇಶದಲ್ಲಿ ಬಿಸಿಯ ಹವಾಮಾನ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ಪ್ರತಿ ಬಿರುಗಾಳಿ ಪ್ರಸರಣಕ್ಕೆ ಕಾರಣವಾಗಿ ತಾಪಮಾನ ಏರಿಕೆಗೆ ಕಾರಣವಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಜೈಸಲ್ಮೇರ್ ಹೊರತುಪಡಿಸಿ ಬರ್ಮೆರ್ ನಲ್ಲಿ 40.3 ಡಿಗ್ರಿ, ಬಿಕನೇರ್ನಲ್ಲಿ 40.0 ಡಿಗ್ರಿ ಹಾಗೂ ಜೋಧಪುರದಲ್ಲಿ 39.5 ಡಿಗ್ರಿ, ಶ್ರೀಗಂಗಾನಗರದಲ್ಲಿ 38.5 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ.





