ರಶ್ಯದಿಂದ ತೈಲ ಆಮದಿಗಾಗಿ ಭಾರತಕ್ಕೆ ಹೆಚ್ಚುವರಿ 25 ಶೇ. ಸುಂಕ; ಅಮೆರಿಕದ ಕ್ರಮಕ್ಕೆ ಜೈಶಂಕರ್ ತೀವ್ರ ಆಕ್ಷೇಪ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಆ. 23: ರಶ್ಯದಿಂದ ತೈಲ ಖರೀದಿ ಮಾಡುತ್ತಿರುವುದಕ್ಕಾಗಿ ಭಾರತಕ್ಕೆ 25 ಶೇಕಡ ಹೆಚ್ಚುವರಿ ಸುಂಕವನ್ನು ವಿಧಿಸುವ ಅಮೆರಿಕದ ಕ್ರಮಕ್ಕೆ ಶನಿವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಇದು ‘‘ಅಸಮರ್ಥನೀಯ ಮತ್ತು ಅತಾರ್ಕಿಕ ಕ್ರಮ’’ವಾಗಿದೆ ಎಂದು ಬಣ್ಣಿಸಿದ್ದಾರೆ.
ಅಮೆರಿಕದೊಂದಿಗಿನ ವ್ಯಾಪಾರ ಮಾತುಕತೆಗಳು ನಡೆಯುತ್ತಿವೆ ಎಂಬುದಾಗಿಯೂ ಅವರು ಹೇಳಿದರು. ಆದರೆ, ಕೆಲವೊಂದು ಲಕ್ಷ್ಮಣ ರೇಖೆಗಳನ್ನು ಭಾರತ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ಅಮೆರಿಕದ ಅಗಾಧ ಸುಂಕವು ಜಾರಿಗೆ ಬರುವ ಕೆಲವೇ ದಿನಗಳ ಮುನ್ನ ಅವರು ಈ ಹೇಳಿಕೆ ನೀಡಿದ್ದಾರೆ.
ಅಮೆರಿಕವು ಮೊದಲೇ ವಿಧಿಸಿರುವ 25 ಶೇಕಡ ಸುಂಕ ಈಗಾಗಲೇ ಚಾಲ್ತಿಯಲ್ಲಿವೆ. ಇದಕ್ಕೆ ಹೆಚ್ಚುವರಿಯಾಗಿ, ರಶ್ಯದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕಾಗಿ ಅಮೆರಿಕವು ಇನ್ನೂ 25 ಶೇಕಡ ಸುಂಕವನ್ನು ಭಾರತೀಯ ಸರಕುಗಳ ಮೇಲೆ ವಿಧಿಸಿದೆ. ಈ ಹೆಚ್ಚುವರಿ 25 ಶೇಕಡ ಸುಂಕವು ಆಗಸ್ಟ್ 27ರಿಂದ ಜಾರಿಗೆ ಬರಲಿದೆ.
‘‘ಉಕ್ರೇನ್ ವಿರುದ್ಧ ರಶ್ಯ ನಡೆಸುತ್ತಿರುವ ಯುದ್ಧಕ್ಕೆ ನಾವು ಹಣ ನೀಡುತ್ತಿದ್ದೇವೆ ಎಂದು ಅವರು ಹೇಳುತ್ತಿದ್ದಾರೆ. ಆದರೆ, ರಶ್ಯ ಮತ್ತು ಯುರೋಪ್ ನಡುವಿನ ವ್ಯಾಪಾರವು ಭಾರತ-ರಶ್ಯ ವ್ಯಾಪಾರಕ್ಕಿಂತಲೂ ಹೆಚ್ಚಾಗಿದೆ. ಹಾಗಾದರೆ, ಯುರೋಪಿಯನ್ ಹಣವು ರಶ್ಯದ ತಿಜೋರಿಗೆ ಹೋಗುತ್ತಿಲ್ಲವೇ? ಇಂಧನ ಬಗ್ಗೆ ಅವರು ಹೇಳುವುದಾದರೆ, ಐರೋಪ್ಯ ಒಕ್ಕೂಟವು ನಮಗಿಂತಲೂ ದೊಡ್ಡ ಖರೀದಿದಾರನಾಗಿದೆ. ರಶ್ಯಕ್ಕೆ ಭಾರತದ ರಫ್ತು ಹೆಚ್ಚಾಗಿದೆ, ಆದರೆ, ತುಂಬಾ ಹೆಚ್ಚೇನೂ ಆಗಿಲ್ಲ’’ ಎಂದು ಜೈಶಂಕರ್ ಹೇಳಿದರು.







