ಮಹಾರಾಷ್ಟ್ರ | ರೈಲ್ವೇ ಹಳಿ ಮೇಲೆ ನಿಂತಿದ್ದವರ ಮೇಲೆ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಹರಿದ ಪ್ರಕರಣ: ಮೃತರ ಸಂಖ್ಯೆ 11ಕ್ಕೆ ಏರಿಕೆ

Photo | NDTV
ಮುಂಬೈ: ಮಹಾರಾಷ್ಟ್ರದ ಜಲಗಾಂವ್ ನಲ್ಲಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಯಿಂದಾಗಿ ರೈಲಿನಿಂದ ಇಳಿದು ಹಳಿಗಳ ಮೇಲೆ ನಿಂತಿದ್ದ ಪ್ರಯಾಣಿಕರ ಮೇಲೆ ವಿರುದ್ಧ ದಿಕ್ಕಿನಿಂದ ಬಂದ ಕರ್ನಾಟಕ ಎಕ್ಸ್ಪ್ರೆಸ್ ರೈಲು ಹರಿದ ಪರಿಣಾಮ ಕನಿಷ್ಠ 11 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.
ಮುಂಬೈನಿಂದ 400 ಕಿ.ಮೀ ದೂರದಲ್ಲಿರುವ ಪಚೋರಾ ಬಳಿಯ ಮಾಹೇಜಿ ಮತ್ತು ಪರ್ಧಾಡೆ ನಿಲ್ದಾಣಗಳ ನಡುವೆ ಈ ಅಪಘಾತ ಸಂಭವಿಸಿದೆ. ಲಕ್ನೋ-ಮುಂಬೈ ನಡುವೆ ಚಲಿಸುವ ಡೈಲಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಯಿಂದಾಗಿ ಯಾರೋ ಸರಪಳಿ ಎಳೆದ ಕಾರಣ ಸಂಜೆ 5ರ ವೇಳೆಗೆ ರೈಲು ಸ್ಥಗಿತಗೊಂಡಿದೆ. ಭಯದಿಂದ ಪುಷ್ಪಕ್ ಎಕ್ಸ್ ಪ್ರೆಸ್ ನಿಂದ ಇಳಿದು ಕೆಲ ಪ್ರಯಾಣಿಕರು ರೈಲ್ವೇ ಹಳಿಯಲ್ಲಿ ನಿಂತಿದ್ದರು. ಈ ವೇಳೆ ಬೆಂಗಳೂರಿನಿಂದ ದಿಲ್ಲಿಗೆ ಬರುತ್ತಿದ್ದ ಕರ್ನಾಟಕ ಎಕ್ಸ್ಪ್ರೆಸ್ ರೈಲು ಪ್ರಯಾಣಿಕರ ಮೇಲೆ ಹರಿದಿದೆ.
ಘಟನೆಯಲ್ಲಿ 11 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಣಿಕರಿಗೆ ಬೇಕಿರುವ ಎಲ್ಲಾ ವೈದ್ಯಕೀಯ ನೆರವುಗಳನ್ನು ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಇಲಾಖೆ ತಿಳಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘಟನೆ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಂತಾಪವನ್ನು ಸೂಚಿಸಿದ್ದಾರೆ. ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿದ್ದು, ಗಾಯಾಳುಗಳಿಗೆ ಚಿಕಿತ್ಸೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಹೇಳಿದ್ದಾರೆ.







