ಜಮ್ಮು ಮತ್ತು ಕಾಶ್ಮೀರದಲ್ಲಿ ನಿಗೂಢ ರೋಗ: ರಜೌರಿಯ 500 ನಿವಾಸಿಗಳು ಕ್ವಾರಂಟೈನ್ ಕೇಂದ್ರಗಳಿಗೆ ರವಾನೆ

PC : PTI
ಶ್ರೀ ನಗರ: ಡಿಸೆಂಬರ್ 2024ರಿಂದ 17 ಮಂದಿ ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿದ್ದು, ಚಿಕಿತ್ಸೆ ಪಡೆಯುತ್ತಿರುವ 11 ಮಂದಿಯಲ್ಲಿ ಇದೇ ನಿಗೂಢ ರೋಗ ಲಕ್ಷಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಬಾದಲ್ ಗ್ರಾಮದ ಸುಮಾರು 400-500 ಮಂದಿ ಗ್ರಾಮಸ್ಥರನ್ನು ಪ್ರತ್ಯೇಕವಾಸಕ್ಕಾಗಿ ಸರಕಾರದ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಕಳೆದೆರಡು ದಿನಗಳಲ್ಲಿ ಈ ಪ್ರದೇಶದಲ್ಲಿ ಮತ್ತೆ ಎರಡು ಇಂತಹುದೇ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ, ಈ ಗ್ರಾಮವನ್ನು ಕಂಟೈನ್ ಮೆಂಟ್ ವಲಯ ಎಂದು ಘೋಷಿಸಿರುವ ರಜೌರಿ ಜಿಲ್ಲಾ ಮ್ಯಾಜಿಸ್ಟ್ರೇಟ್, ಈ ಗ್ರಾಮದ ಕುಟುಂಬಗಳು ಹಾಗೂ ಅವರ ಸಂಬಂಧಿಕರನ್ನು ಸ್ಥಳಾಂತರಿಸಲು ನಿರ್ಧರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಬುದಾಲ್ ಚ. ಜಾವೇದ್ ಇಕ್ಬಾಲ್, “ಇಡೀ ಗ್ರಾಮವನ್ನು ಸ್ಥಳಾಂತರಿಸಲಾಗುತ್ತಿಲ್ಲ. ಬದಲಿಗೆ ರೋಗಕ್ಕೆ ತುತ್ತಾಗಿರುವ ಕುಟುಂಬಗಳು, ಅವರ ವಿಸ್ತರಿತ ಕುಟುಂಬಗಳು ಹಾಗೂ ಹತ್ತಿರದ ಸಂಬಂಧಿಕರನ್ನು ಅವರ ಸುರಕ್ಷತೆಗಾಗಿ ಸ್ಥಳಾಂತರಿಸಲಾಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಗ್ರಾಮಸ್ಥರನ್ನು ಜಿಎಂಸಿ ರಜೌರಿ, ರಜೌರಿಯ ಹಳೆ ಆಸ್ಪತ್ರೆ, ರಜೌರಿಯ ಶುಶ್ರೂಷೆ ಕಾಲೇಜು ಹಾಗೂ ಬಾಲಕರ ಪ್ರೌಢ ಶಾಲೆಗೆ ಸ್ಥಳಾಂತರಿಸಲಾಗಿದ್ದು, ನಿಯಮಿತ ತಪಾಸಣೆ ಹಾಗೂ ಆಹಾರ ಪೂರೈಕೆ ಸೇರಿದಂತೆ ಅವರು ಉಳಿದುಕೊಳ್ಳಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ ಎನ್ನಲಾಗಿದೆ.
ಈ ನಿಗೂಢ ರೋಗವು ಡಿಸೆಂಬರ್ 2ರಂದು ನಡೆದಿದ್ದ ಫಝಲ್ ಹುಸೈನ್ ಅವರ ವಿವಾಹ ಭೋಜನ ಕೂಟದ ನಂತರ ಡಿಸೆಂಬರ್ 7, 2024ರಿಂದ ಕಾಣಿಸಿಕೊಂಡಿದೆ. ಫಝಲ್ ಹಾಗೂ ಅವರ ಐವರು ಪುತ್ರಿಯರು ಈ ಸಮಾರಂಭ ನಡೆದ ಐದು ದಿನಗಳಲ್ಲಿ ಅಸ್ವಸ್ಥರಾಗಿದ್ದು, ನಂತರ ಮೃತಪಟ್ಟಿದ್ದಾರೆ.
ಇದರ ಬೆನ್ನಿಗೇ, ಇನ್ನೆರಡು ಕುಟುಂಬಗಳೂ ಅಸ್ವಸ್ಥತೆಗೆ ಒಳಗಾಗಿವೆ. ಮುಹಮ್ಮದ್ ರಫೀಕ್ ಎಂಬವರು ತಮ್ಮ ಪತ್ನಿ ಹಾಗೂ ಮೂವರು ಮಕ್ಕಳನ್ನು ಕಳೆದುಕೊಂಡರೆ, ಮುಹಮ್ಮದ್ ಅಸ್ಲಾಮ್ ಎಂಬವರ ಕುಟುಂಬವು ಆರು ಮಕ್ಕಳು ಹಾಗೂ ತಾಯಿಯ ಚಿಕ್ಕಪ್ಪ ಹಾಗೂ ಚಿಕ್ಕಮ್ಮನನ್ನು ಕಳೆದುಕೊಂಡಿದೆ.
ಜಿಎಂಸಿ ರಜೌರಿಯ ಪ್ರಾಂಶುಪಾಲ ಡಾ. ಅಮರ್ ಜೀತ್ ಸಿನ್ಹಾ ಭಾಟಿಯಾ ಪ್ರಕಾರ, ಇನ್ನೂ 10 ಮಂದಿ ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಆರು ರೋಗಿಗಳು ಚೇತರಿಕೆ ಕಾಣುತ್ತಿದ್ದು, ಮೂವರನ್ನು ಜಮ್ಮುವಿನ ಎಸ್ಎಂಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಓರ್ವ ರೋಗಿ ಚೇತರಿಸಿಕೊಳ್ಳುತ್ತಿದ್ದು, ಪಿಜಿಐ ಚಂಡೀಗಢದಲ್ಲಿರುವ ಉಳಿದ ರೋಗಿಗಳೂ ಚೇತರಿಸಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದ್ದಾರೆ. ಈ 10 ಮಂದಿ ರೋಗಿಗಳ ಪೈಕಿ 8 ಮಂದಿ ಸೋಂಕಿಗೊಳಗಾಗಿರುವ ಕುಟುಂಬದವರಾಗಿದ್ದರೆ, ಉಳಿದ ಇಬ್ಬರು ರೋಗಿಗಳು ಯಾವುದೇ ಸಂಬಂಧವಿಲ್ಲದ ಕುಟುಂಬಕ್ಕೆ ಸೇರಿದ್ದಾರೆ.







