ನಿವೃತ್ತ ಯೋಧನ ಹತ್ಯೆ ಪ್ರಕರಣ | ಜಮ್ಮುಕಾಶ್ಮೀರದಲ್ಲಿ 500ಕ್ಕೂ ಅಧಿಕ ಮಂದಿಯ ಬಂಧನ

ಸಾಂದರ್ಭಿಕ ಚಿತ್ರ | PC : freepik.com
ಶ್ರೀನಗರ : ಕುಲಗಾಂವ್ ಜಿಲ್ಲೆಯಲ್ಲಿ ಶಂಕಿತ ಉಗ್ರರು ನಿವೃತ್ತ ಸೈನಿಕರೊಬ್ಬರನ್ನು ಹತ್ಯೆಗೈದು, ಅವರ ಪತ್ನಿ ಹಾಗೂ ಸೋದರಳಿಯನನ್ನು ಗಾಯಗೊಳಿಸಿದ ಘಟನೆಯ ಬಳಿಕ ಜಮ್ಮುಕಾಶ್ಮೀರ ಪೊಲೀಸರು 500ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತರಲ್ಲಿ ಬಹುತೇಕ ಮಂದಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಸವಾಗಿರುವ ಕಾಶ್ಮೀರಿ ಉಗ್ರರ ಬಂಧುಗಳೆಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್ ’ಸುದ್ದಿಜಾಲತಾಣ ಪ್ರಕಟಿಸಿದ ವರದಿ ತಿಳಿಸಿದೆ.
45 ವರ್ಷ ವಯಸ್ಸಿನ ನಿವೃತ್ತ ಯೋಧ, ಮಂಝೂರ್ ಅಹಮದ್ ವಾಗಾಯ್ ಹಾಗೂ ಅವರ ಪತ್ನಿ ಮತ್ತು ಸೋದರಳಿಯನ ಮೇಲೆ ಸೋಮವಾರ ಬೆಹಿಬಾಗ್ ಗ್ರಾಮದಲ್ಲಿರುವ ಅವರ ಮನೆಯಲ್ಲಿ ಅಜ್ಞಾತ ಬಂಧೂಕುದಾರಿಗಳು ಗುಂಡಿನ ದಾಳಿ ನಡೆಸಿದ್ದರು. ಮಂಝೂರ್ ವಗಾಯ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಅವರ ಪತ್ನಿ ಹಾಗೂ ಸೋದರಳಿಯ ಕಾಲುಗಳಿಗೆ ಗಾಯಗಳಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಮ್ಮುಕಾಶ್ಮೀರಕ್ಕೆ ಏಕಕಾಲದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಶಂಕಿತ ಉಗ್ರರ ಕುಟುಂಬ ಸದಸ್ಯರನ್ನು ಹಾಗೂ ಅವರ ಬಂಧುಗಳನ್ನು ವಶಕ್ಕೆ ತೆಗೆದುಕೊಂಡಿರುವುದು ಇದು ಮೊದಲ ಸಲವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪೊಲೀಸರು ಪಾಕಿಸ್ತಾನ ಮೂಲದ ಕಾಶ್ಮೀರಿ ಉಗ್ರರನ್ನು ಗುರಿಯಿಸಿ ಅವರ ಆಸ್ತಿಗಳಿಗೆ ಮುಟ್ಟುಗೋಲು ಹಾಕುತ್ತಿದ್ದಾರೆ.