ಜಮ್ಮು-ಕಾಶ್ಮೀರದ ಗಡಿಯೇತರ ಪ್ರದೇಶಗಳಲ್ಲಿ ಶಾಲೆ, ಕಾಲೇಜುಗಳು ಪುನಾರಂಭ

PC : PTI
ಹೊಸದಿಲ್ಲಿ: ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದದ ಬಳಿಕ ಕಾಶ್ಮೀರದ ಹೆಚ್ಚಿನ ಭಾಗಗಳಲ್ಲಿ ಶಾಲೆ ಹಾಗೂ ಕಾಲೇಜುಗಳು ಮಂಗಳವಾರ ಪುನಾರಂಭವಾಗಿವೆ.
ಆದರೆ, ಕುಪ್ವಾರ, ಬಾರಾಮುಲ್ಲಾದಂತಹ ಪ್ರದೇಶಗಳಲ್ಲಿ ಹಾಗೂ ಗುರೇಝ್ ನ ಉಪ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳು ಈಗಲೂ ಮುಚ್ಚಿವೆ. ಈ ವಲಯಗಳಲ್ಲಿ ಈಗಲೂ ನಿಗಾ ಇರಿಸಲಾಗಿದೆ.
ಆಡಳಿತ ಮುಖ್ಯವಾಗಿ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಹಾಗೂ ಅಂತಾರಾಷ್ಟ್ರೀಯ ಗಡಿ (ಐಬಿ) ಸಮೀಪದ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಶಾಲೆಗಳನ್ನು ಮರು ಆರಂಭಿಸುವ ನಿರ್ಧಾರ ತೆಗೆದುಕೊಂಡಿದೆ.
ಈ ಬೆಳವಣಿಗೆಯನ್ನು ‘ಎಕ್ಸ್’ನಲ್ಲಿ ದೃಢಪಡಿಸಿರುವ ಶಿಕ್ಷಣ ಸಚಿವೆ ಸಕೀನಾ ಇಟೂ, ಜಮ್ಮು ಹಾಗೂ ಕಾಶ್ಮೀರದ ಗಡಿಯೇತರ ಜಿಲ್ಲೆಗಳಲ್ಲಿ ಬುಧವಾರದಿಂದ ಎಲ್ಲಾ ಶಾಲೆ ಹಾಗೂ ಕಾಲೇಜುಗಳು ಪುನಾರಂಭವಾಗಲಿದೆ ಎಂದು ದೃಢಪಡಿಸಿದ್ದಾರೆ.
ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳನ್ನು ರಕ್ಷಿಸಲು ಭದ್ರತಾ ಕ್ರಮವಾಗಿ ಗಡಿ ಪ್ರದೇಶದಲ್ಲಿರುವ ಶಾಲೆಗಳು ಹಾಗೂ ಕಾಲೇಜುಗಳು ಮುಚ್ಚಿರಲಿವೆ. ಈ ಶಿಕ್ಷಣ ಸಂಸ್ಥೆಗಳ ಪುನಾರಂಭವನ್ನು ಪರಿಸ್ಥಿತಿ ಅವಲೋಕಿಸಿದ ಬಳಿಕ ನಿರ್ಧರಿಸಲಾಗುವುದು ಎಂದು ಆಡಳಿತ ತಿಳಿಸಿದೆ.
ಜಮ್ಮು ಹಾಗೂ ಕಾಶ್ಮೀರದ ಹಲವು ಗಡಿ ಪ್ರದೇಶಗಳ ಮೇಲೆ ಪಾಕಿಸ್ತಾನ ಸೇನಾ ಪಡೆ ಶೆಲ್ ದಾಳಿ ನಡೆಸಿದೆ. ಇದರಿಂದ 25 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ರಾಜೌರಿಯ ಹೆಚ್ಚುವರಿ ಉಪ ಅಭಿವೃದ್ಧಿ ಆಯುಕ್ತ ರಾಜ್ ಕುಮಾರ್ ಥಪ್ಪಾ, ಗಡಿ ಭದ್ರತಾ ಪಡೆ (ಬಿಎಸ್ಎಫ್)ಯ ಇನ್ಸ್ಪೆಕ್ಟರ್ ಮುಹಮ್ಮದ್ ಇಮ್ತಿಯಾಝ್ ಸೇರಿದ್ದಾರೆ. 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಹಲವು ಮನೆ, ಅಂಗಡಿ ಹಾಗೂ ವಾಹನಗಳಿಗೆ ಹಾನಿ ಉಂಟಾಗಿವೆ.
ಜಮ್ಮುವಿನ ಪೂಂಛ್ ಜಿಲ್ಲೆ ಶೆಲ್ ದಾಳಿಯಿಂದ ತೀವ್ರವಾಗಿ ಹಾನಿಗೀಡಾಗಿದೆ. ಮನೆ ಮೇಲೆ ಶೆಲ್ ಬಿದ್ದ ಪರಿಣಾಮ ಸಹೋದರ ಹಾಗೂ ಸಹೋದರಿ ಸಹಿತ 13 ಮಂದಿ ಮೃತಪಟ್ಟಿದ್ದಾರೆ.
ಶಾಲಾ ಕಟ್ಟಡ, ಮನೆ ಹಾಗೂ ಮೂಲ ಸೌಕರ್ಯಗಳಿಗೆ ಉಂಟಾದ ಹಾನಿಯ ಮೌಲ್ಯಮಾಪನ ಮಾಡಿದ ಬಳಿಕವೇ ಗಡಿ ಪ್ರದೇಶದಲ್ಲಿರುವ ಶಾಲೆಗಳನ್ನು ಮತ್ತೆ ತೆರೆಯಲು ಸರಕಾರ ಅವಕಾಶ ನೀಡುವ ನಿರೀಕ್ಷೆ ಇದೆ.
ಹಲವು ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬ ಮನೆಗೆ ಹಿಂದಿರುಗಿದ ಬಳಿಕವಷ್ಟೇ ಅವರು ಶಾಲೆಗೆ ತೆರಳಲು ಸಾಧ್ಯ. ಶೆಲ್ ದಾಳಿಯಿಂದಾಗಿ ನೂರಾರು ಜನರು ಸ್ಥಳಾಂತರಗೊಂಡಿರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಮಸ್ಯೆಯಾಗಬಹುದು.







