ಸರ್ವಪಕ್ಷಗಳ ನಿಯೋಗಗಳಲ್ಲಿ ಜಮ್ಮು ಕಾಶ್ಮೀರವನ್ನು ಪ್ರತಿನಿಧಿಸಲಿರುವ ಆಝಾದ್, ಅಲ್ತಾಫ್, ಖಟಾನಾ

ಗುಲಾಂ ನಬಿ ಆಝಾದ್ | PTI
ಜಮ್ಮು: ಜಮ್ಮು ಹಾಗೂ ಕಾಶ್ಮೀರದ ರಾಜಕೀಯ ನಾಯಕರಾದ ಗುಲಾಂ ನಬಿ ಆಝಾದ್, ಮಿಯಾನ್ ಅಲ್ತಾಫ್ ಹಾಗೂ ಗುಲಾಂ ಅಲಿ ಖಟಾನಾ ಭಯೋತ್ಪಾದನೆ ವಿರುದ್ಧ ದೇಶದ ಶೂನ್ಯ ಸಹಿಷ್ಣುತೆಯ ಸಂದೇಶ ಬಿಂಬಿಸಲು ದೇಶದಿಂದ ಜಗತ್ತಿನ ವಿವಿಧ ಭಾಗಗಳಿಗೆ ಕಳುಹಿಸಲಾಗುವ ಸರ್ವ ಪಕ್ಷಗಳ ನಿಯೋಗಗಳ ಭಾಗವಾಗಲಿದ್ದಾರೆ.
ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಗುಲಾಂ ನಬಿ ಆಝಾದ್ ಅವರು ಬಿಜೆಪಿ ಸಂಸದ ಬೈಜಯಂತ್ ಪಾಂಡಾ ಅವರ ನೇತತ್ವದ ನಿಯೋಗದ ಭಾಗವಾಗಲಿದ್ದಾರೆ. ಪಾಂಡಾ ನೇತೃತ್ವದ ನಿಯೋಗ ಸೌದಿ ಅರೇಬಿಯಾ, ಪನಮಾ, ಗುಯಾನಾ, ಬ್ರೆಝಿಲ್ ಹಾಗೂ ಕೊಲಂಬಿಯಾಕ್ಕೆ ಭೇಟಿ ನೀಡಲಿದೆ.
ನ್ಯಾಷನಲ್ ಕಾನ್ಫರೆನ್ಸ್ ನ ಸಂಸದ ಮಿಯಾನ್ ಅಲ್ತಾಫ್ ಡಿಎಂಕೆ ಸಂಸದೆ ಕನ್ನಿಮೋಳಿ ಕರುಣಾನಿಧಿ ನೇತೃತ್ವದ ನಿಯೋಗದ ಭಾಗವಾಗಲಿದ್ದಾರೆ. ಈ ನಿಯೋಗ ಸ್ಪೈನ್, ಗ್ರೀಸ್, ಲಾಟ್ವಿಯಾ ಹಾಗೂ ರಶ್ಯಾಕ್ಕೆ ಭೇಟಿ ನೀಡಲಿದೆ.
ರಾಜ್ಯ ಸಭೆಯ ನಾಮ ನಿರ್ದೇಶಿತ ಸದಸ್ಯ ಗುಲಾಂ ಅಲಿ ಖಟಾನಾ ಬಿಜೆಪಿ ಸಂಸದ ರವಿ ಶಂಕರ್ ಪ್ರಸಾದ್ ನೇತೃತ್ವದ ನಿಯೋಗದ ಭಾಗವಾಗಲಿದ್ದಾರೆ ಈ ನಿಯೋಗ ಬ್ರಿಟನ್, ಫ್ರಾನ್ಸ್, ಜರ್ಮನಿ, ಇಯು, ಇಟಲಿ ಹಾಗೂ ಡೆನ್ಮಾರ್ಕ್ಗೆ ಭೇಟಿ ನೀಡಲಿದೆ.
‘ಆಪರೇಷನ್ ಸಿಂಧೂರ’ದ ಬಳಿಕ ತನ್ನ ರಾಜತಾಂತ್ರಿಕ ಉಪಕ್ರಮದ ಭಾಗವಾಗಿ ಕೇಂದ್ರ ಸರಕಾರ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧದ ತನ್ನ ದೃಢ ನಿಲುವನ್ನು ವರ್ಧಿಸಲು 7 ಸರ್ವ ಪಕ್ಷಗಳ ನಿಯೋಗಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರು ಸೇರಿದಂತೆ ಪ್ರಮುಖ ಪಾಲುದಾರ ದೇಶಗಳಿಗೆ ಕಳುಹಿಸಲಿದೆ.







