ಕೋಟಾದಲ್ಲಿ ಜಮ್ಮು ಮತ್ತು ಕಾಶ್ಮೀರದ ನೀಟ್ ಆಕಾಂಕ್ಷಿ ಆತ್ಮಹತ್ಯೆ; ಈ ವರ್ಷದಲ್ಲಿ 15ನೇ ಘಟನೆ

ಸಾಂದರ್ಭಿಕ ಚಿತ್ರ
ಕೋಟಾ (ರಾಜಸ್ಥಾನ): ಕೋಟಾ ನಗರದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣದಲ್ಲಿ ಆಗುತ್ತಿರುವ ಏರಿಕೆಯ ಬಗ್ಗೆ ರಾಜಸ್ಥಾನ ಸರಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ಕೇವಲ ಮೂರೇ ದಿನಗಳ ಅಂತರದಲ್ಲಿ ಜಮ್ಮು ಮತ್ತು ಕಾಶ್ಮೀರದ 18 ವರ್ಷದ ವಿದ್ಯಾರ್ಥಿನಿಯೊಬ್ಬಳು ಕೋಟಾದಲ್ಲಿರುವ ತನ್ನ ವಿದ್ಯಾರ್ಥಿ ನಿಲಯದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಇದು ಈ ವರ್ಷದಲ್ಲಿ ಈವರೆಗೆ ವರದಿಯಾಗಿರುವ 15ನೇ ಘಟನೆಯಾಗಿದ್ದು, ಈ ತಿಂಗಳೊಂದರಲ್ಲೇ ನಡೆದಿರುವ ಎರಡನೆ ಘಟನೆ ಆಗಿದೆ.
ಮೃತ ವಿದ್ಯಾರ್ಥಿನಿಯನ್ನು ಝೀಶನ್ ಎಂದು ಗುರುತಿಸಲಾಗಿದ್ದು, ಪೊಲೀಸರ ಪ್ರಕಾರ, ಆಕೆ ಪ್ರತಾಪ್ ಚೌರಾಹಾದ ಪೇಯಿಂಗ್ ಗೆಸ್ಟ್ ಕೊಠಡಿಯೊಂದರಲ್ಲಿ ವಾಸಿಸುತ್ತಿದ್ದಳು ಎನ್ನಲಾಗಿದೆ. ಈ ಘಟನೆ ನಡೆಯುವುದಕ್ಕೂ ಮುನ್ನ, ತನ್ನ ಸಂಬಂಧಿಯೊಬ್ಬರಿಗೆ ಕರೆ ಮಾಡಿರುವ ಝೀಶನ್ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.
ತಕ್ಷಣವೇ ಅದೇ ಕಟ್ಟಡದ ಮೇಲಂತಸ್ತಿನ ಕೊಠಡಿಯಲ್ಲಿದ್ದ ಮತ್ತೊಬ್ಬ ವಿದ್ಯಾರ್ಥಿನಿಗೆ ಕರೆ ಮಾಡಿರುವ ಝೀಶನ್ ಸಂಬಂಧಿ ಬುರ್ಹಾನ್, ಝೀಶನ್ ಬಗ್ಗೆ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಕೂಡಲೇ ಝೀಶನ್ ಇದ್ದ ಕೊಠಡಿಯ ಬಳಿಗೆ ಆ ವಿದ್ಯಾರ್ಥಿನಿ ಧಾವಿಸಿದಾಗ, ಆಕೆಯ ಕೊಠಡಿಗೆ ಒಳಗಿನಿಂದ ಚಿಲಕ ಹಾಕಿರುವುದು ಕಂಡು ಬಂದಿದೆ. ಆ ವಿದ್ಯಾರ್ಥಿ ನಿಲಯದಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ಆಕೆಯ ಕೊಠಡಿಯ ಬಾಗಿಲನ್ನು ಮುರಿದು ಒಳ ಹೊಕ್ಕಾಗ, ಝೀಶನ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಮೇ 3ರಂದೂ ಕೂಡಾ ಮಧ್ಯಪ್ರದೇಶದ ನೀಟ್ ಪರೀಕ್ಷಾಂಕ್ಷಿಯೊಬ್ಬರು ಕೋಟಾದ ತನ್ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







