ಜಮ್ಮುಕಾಶ್ಮೀರ | ರಜೌರಿಯಲ್ಲಿ ಮತ್ತೆ ಕಾಣಿಸಿಕೊಂಡ ನಿಗೂಢ ಕಾಯಿಲೆ : 35 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಸಾಂದರ್ಭಿಕ ಚಿತ್ರ | PC : PTI
ರಜೌರಿ: ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ 17 ಮಂದಿ ನಾಗರಿಕರು ನಿಗೂಢವಾದ ಕಾಯಿಲೆಯಿಂದ ಮೃತಪಟ್ಟ ಆರು ತಿಂಗಳುಗಳು ಬಳಿಕ ಕನಿಷ್ಠ 35 ಮಂದಿ ಗ್ರಾಮಸ್ಥರು ಅದೇ ರೀತಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಮಾಂಜಾಕೋಟ್ ತಹಸೀಲ್ನಲ್ಲಿರುವ ಕೊಟ್ಲಿಪಾರ್ರಾನ್ ಗ್ರಾಮದಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣವನ್ನು ಮೂಡಿದೆ.
ಇತ್ತೀಚಿನ ದಿನಗಳಲ್ಲಿ ಸುಮಾರು 35 ಮಂದಿ ನಿವಾಸಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ರಜೌರಿಯ ಸರಕಾರಿ ವೈದ್ಯಕೀಯ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರ ಪರಿಸ್ಥಿತಿ ಸ್ಥಿರವಾಗಿದೆಯೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ನಿಗೂಢಕಾಯಿಲೆಯಿಂದ ಬಳಲುತ್ತಿರುವ ಗ್ರಾಮಸ್ಥರು ಹೊಟ್ಟೆನೋವು, ಜ್ವರ, ನಿರ್ಜಲೀಕರಣ ಹಾಗೂ ಅತಿಸಾರದ ಲಕ್ಷಣಗಳನ್ನು ಪ್ರದರ್ಶಿಸಿದ್ದಾರೆ. ಕಲುಷಿತ ಕುಡಿಯುವ ನೀರಿನಿಂದ ಈ ಕಾಯಿಲೆ ಬಂದಿರುವ ಸಾಧ್ಯತೆಯಿದೆಯೆಂದು ವೈದ್ಯರು ಶಂಕಿಸಿದ್ದಾರೆ. ಜಿಎಂಸಿ ರಜೌರಿ ಆಸ್ಪತ್ರೆಯ ತಂಡವೊಂದು ಸ್ಥಳೀಯ ಬಾವಿಗಳಿಂದ ನಿರೀನ ಮಾದರಿಗಳನ್ನು ಸಂಗ್ರಹಿಸಿದೆ. ನೀರು ಪರೀಕ್ಷೆಯ ಫಲಿತಾಂಶ ಬರುವವರಿಗೆ ಆ ಬಾವಿಗಳಿಗೆ ಬೀಗ ಜಡಿಯಲಾಗಿದೆ.
ಈ ಘಟನೆಯು ಬಧಾಲ್ ದುರಂತದ ಕರಾಳ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ರಜೌರಿ ಜಿಲ್ಲೆಯ ಬಧಾಲ್ ಗ್ರಾಮದಲ್ಲಿ 2024ರ ಡಿಸೆಂಬರ್ನಿಂದ 2025ರ ಜನವರಿವರೆಗೆ 50 ದಿನಗಳ ಅವಧಿಯಲ್ಲಿ ನಾಲ್ವರು ವಯಸ್ಕರು, 13 ಮಕ್ಕಳು ಸೇರಿದಂತೆ 17 ಮಂದಿ ನಿಗೂಢ ಕಾಯಿಲೆಯ ಲಕ್ಷಣಗಳನ್ನು ಪ್ರದರ್ಶಿಸಿದ ಬಳಿಕ ಮೃತಪಟ್ಟಿದ್ದರು.
ಆದರೆ ಅನಾರೋಗ್ಯಕ್ಕೆ ಯಾವುದೇ ಸೋಂಕು ಹರಡುವ ಬ್ಯಾಕ್ಟೀರಿಯಾ ಅಥವಾ ವೈರಸ್ ಕಾರಣವಲ್ಲವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಆ ನಂತರ ಸಂಬಂಧಪಟ್ಟ ಇಲಾಖೆಗಳು ಬಧಾಲ್ ಗ್ರಾಮವನ್ನು ನಿರ್ಬಂಧಿತ ವಲಯವೆಂದು ಘೋಷಿಸಿದವು ಹಾಗೂ ಅಲ್ಲಿನ ನಿವಾಸಿಗಳನ್ನು ನಿರ್ಬಂಧಿತ ಕೇಂದ್ರವೊಂದಕ್ಕೆ ಸ್ಥಳಾಂತರಿಸಲಾಯಿತು. ಸುಮಾರು ಒಂದು ತಿಂಗಳಿಗೂ ಅಧಿಕ ಸಮಯದ ಬಳಿಕ ಅವರನ್ನು ಸ್ವಗ್ರಾಮಕ್ಕೆ ಮರಳಲು ಅನುಮತಿ ನೀಡಲಾಯಿತು.
ಬಧೌಲ್ನಲ್ಲಿ ಸಂಭವಿಸಿದ ಸಾವುಗಳ ಬಗ್ಗೆ ತನಿಖೆ ನಡೆಸಲು ಅಮಿತ್ ಶಾ ಅವರು ಉನ್ನತ ಮಟ್ಟದ ಅಂತರ್ ಸಚಿವಾಲಯ ತಂಡವೊಂದನ್ನು ನೇಮಿಸಿದ್ದರು. ಕಳೆದ ಜನವರಿಯಲ್ಲಿ ರಜೌರಿಗೆ ಆಗಮಿಸಿದ ತಂಡದಲ್ಲಿ ಉನ್ನತ ವೈದ್ಯಕೀಯ ಸಂಸ್ಥೆಗಳ ತಜ್ಞರು ಕೂಡಾ ಒಳಗೊಂಡಿದ್ದರು. ಸ್ಥಳೀಯ ಆಡಳಿತದ ಜೊತೆ ಕಾರ್ಯನಿರ್ವಹಿಸುವುದು, ಸಾವಿನ ಕಾರಣಗಳನ್ನು ಗುರುತಿಸುವುದು ಹಾಗೂ ಸಂತ್ರಸ್ತ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಒದಗಿಸುವ ಹೊಣೆಯನ್ನು ಅವರಿಗೆ ವಹಿಸಲಾಗಿತ್ತು.
ಬಧಾಲ್ಘಟನೆ ಮರುಕಳಿಸುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆಯೆಂದು ರಜೌರಿ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮುಂದಿನ ನೋಟಿಸ್ ಬರುವವರೆಗೆ ಸ್ಥಳೀಯ ಜಲಮೂಲಗಳನ್ನು ಬಳಸದಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ. ಸುರಕ್ಷಿತ ನೀರಿನ ಬಳಕೆ ಕುರಿತು ಜನಜಾಗೃತಿ ಅಭಿಯಾನವನ್ನು ಆರಂಭಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.