ಜಮ್ಮುಕಾಶ್ಮೀರ 7,000 ವಕ್ಫ್ ಆಸ್ತಿಗಳನ್ನು ಕಳೆದುಕೊಂಡಿದೆ, ಇದು ಮುಸ್ಲಿಮರ ವಿರುದ್ಧ ಹೊಸ ದಾಳಿ: ಮೆಹಬೂಬ ಮುಫ್ತಿ

ಮೆಹಬೂಬ ಮುಫ್ತಿ | Photo Credit : PTI
ಶ್ರೀನಗರ,ಡಿ.12: ಒಂದೇ ವರ್ಷದಲ್ಲಿ ಜಮ್ಮುಕಾಶ್ಮೀರವು 7,000ಕ್ಕೂ ಅಧಿಕ ವಕ್ಫ್ ನೋಂದಾಯಿತ ಆಸ್ತಿಗಳನ್ನು ಕಳೆದುಕೊಂಡಿದೆ ಎಂದು ಹೇಳಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿಯವರು, ಇದು ಮುಸ್ಲಿಮರ ವಿರುದ್ಧ ಹೊಸ ದಾಳಿಯಾಗಿದೆ ಎಂದು ಬಣ್ಣಿಸಿದ್ದಾರೆ.
ಹೊಸ ಉಮೀದ್ ಡೇಟಾ ಬೇಸ್ ನಲ್ಲಿ ದೇಶಾದ್ಯಂತ 3.55 ಲಕ್ಷಕ್ಕೂ ಅಧಿಕ ವಕ್ಫ್ ಆಸ್ತಿಗಳು ಕಣ್ಮರೆಯಾಗಿದ್ದು, ಜಮ್ಮುಕಾಶ್ಮೀರವೊಂದೇ 7,240 ಆಸ್ತಿಗಳನ್ನು ಕಳೆದುಕೊಂಡಿದೆ. ಇದು ವಕ್ಫ್ ಆಸ್ತಿಗಳ ಪಾರದರ್ಶಕತೆ ಮತ್ತು ರಕ್ಷಣೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಮುಫ್ತಿ ಶುಕ್ರವಾರ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
‘ಹಿಂಸಾಚಾರ, ನೆಲಸಮಗಳು ಮತ್ತು ಹಕ್ಕು ನಿರಾಕರಣೆ ಬಳಿಕ ವಕ್ಫ್ ಭೂಮಿಗಳನ್ನು ಕಿತ್ತುಕೊಳ್ಳುತ್ತಿರುವುದು ಮುಸ್ಲಿಮರ ವಿರುದ್ಧದ ಹೊಸ ದಾಳಿ ಎಂಬಂತೆ ಭಾಸವಾಗುತ್ತಿದೆ. ಇದು ಎಲ್ಲಿ ಅಂತ್ಯಗೊಳ್ಳುತ್ತದೆ?’ ಎಂದು ಅವರು ಪ್ರಶ್ನಿಸಿದ್ದಾರೆ.
ಡಿ.7ಕ್ಕೆ ಇದ್ದಂತೆ ದೇಶಾದ್ಯಂತ ನೋಂದಾಯಿತ ವಕ್ಫ್ ಆಸ್ತಿಗಳ ದತ್ತಾಂಶಗಳನ್ನು ಮುಫ್ತಿ ಹಂಚಿಕೊಂಡಿದ್ದಾರೆ.
ಈ ದತ್ತಾಂಶಗಳ ಪ್ರಕಾರ ಡಿ.9, 2024ರಂದು ಜಮ್ಮುಕಾಶ್ಮೀರದಲ್ಲಿ 32,533 ನೋಂದಾಯಿತ ವಕ್ಫ್ ಆಸ್ತಿಗಳಿದ್ದರೆ ಈ ವರ್ಷದ ಡಿ.7ರ ವೇಳೆಗೆ ಅದು 7,240ರಷ್ಟು ಕಡಿಮೆಯಾಗಿದ್ದು, 25,293ಕ್ಕೆ ಕುಸಿದಿದೆ.







