ಜಮ್ಮು-ಕಾಶ್ಮೀರ: ಸೇನಾ ಶಿಬಿರದಲ್ಲಿ ಗುಂಡಿನ ದಾಳಿ; JCO ಮೃತ್ಯು

ಸಾಂದರ್ಭಿಕ ಚಿತ್ರ | Photo Credit ; PTI
ಜಮ್ಮು, ಡಿ. 24: ಜಮ್ಮು ಹಾಗೂ ಕಾಶ್ಮೀರದ ಸಾಂಬಾ ಜಿಲ್ಲೆಯ ಸೇನಾ ಶಿಬಿರದ ಒಳಗೆ ನಡೆದ ಗುಂಡಿನ ದಾಳಿ ಘಟನೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಒಬ್ಬರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಇಲಾಖೆಯ ವಕ್ತಾರ ಬುಧವಾರ ತಿಳಿಸಿದ್ದಾರೆ.
ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಆದರೆ, ಅವರು ಯಾವುದೇ ಭಯೋತ್ಪಾದನಾ ದಾಳಿಯ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.
‘‘ಸಾಂಬಾದ ಸೇನಾ ಘಟಕದ JCO ಜಮ್ಮುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭ ಗುಂಡಿನ ದಾಳಿಗೆ ಗುರಿಯಾದರು. ಗಂಭೀರ ಗಾಯಗೊಂಡ ಅವರು ಅನಂತರ ಮೃತಪಟ್ಟರು. ಈ ಹಂತದಲ್ಲಿ ಈ ದಾಳಿಯನ್ನು ಭಯೋತ್ಪಾದನೆಯ ಆಯಾಮದಲ್ಲಿ ನೋಡಲು ಸಾಧ್ಯವಿಲ್ಲ’’ ಎಂದು ವಕ್ತಾರ ಹೇಳಿದ್ದಾರೆ.
‘‘ಈ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಸತ್ಯಾಸತ್ಯತೆ ದೃಢವಾದ ಬಳಿಕ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು’’ ಎಂದು ಅವರು ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಮೃತಪಟ್ಟ ಯೋಧನನ್ನು ಸುಬೇದಾರ್ ಸುರ್ಜೀತ್ ಸಿಂಗ್ ಎಂದು ಸೇನೆಯ ರೈಸಿಂಗ್ ಸ್ಟಾರ್ ಕಾರ್ಪ್ಸ್ ಗುರುತಿಸಿದೆ. ಅಲ್ಲದೆ, ಅವರಿಗೆ ಗೌರವ ನಮನ ಸಲ್ಲಿಸಿದೆ.
‘‘ಜಮ್ಮುವಿನಲ್ಲಿ ಕರ್ತವ್ಯದ ಸಂದರ್ಭ ಪ್ರಾಣ ತ್ಯಾಗ ಮಾಡಿದ ಧೀರ ಸುಬೇದಾರ್ ಸುರ್ಜೀತ್ ಸಿಂಗ್ ಅವರಿಗೆ ರೈಸಿಂಗ್ ಸ್ಟಾರ್ ಕಾರ್ಪ್ಸ್ ಗೌರವ ನಮನ ಸಲ್ಲಿಸುತ್ತದೆ. ಈ ದುಃಖದ ಸಂದರ್ಭ ಭಾರತೀಯ ಸೇನೆ ಮೃತರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆ ಹಾಗೂ ಬೆಂಬಲ ನೀಡುತ್ತದೆೆ’’ ಎಂದು ರಕ್ಷಣಾ ಇಲಾಖೆ ವಕ್ತಾರ ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ.







