ಭಯೋತ್ಪಾದಕರೊಂದಿಗೆ ನಂಟು | ಜಮ್ಮು–ಕಾಶ್ಮೀರದ ಐವರು ಸರಕಾರಿ ನೌಕರರ ವಜಾ

ಶ್ರೀನಗರ, ಜ.13: ಜಮ್ಮು–ಕಾಶ್ಮೀರದ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಯೋತ್ಪಾದಕ ಸಂಘಟನೆಗಳೊಂದಿಗೆ ಶಂಕಿತ ನಂಟು ಹೊಂದಿದ್ದ ಆರೋಪದ ಮೇಲೆ ಮಂಗಳವಾರ ಇನ್ನೂ ಐವರು ಸರಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಿದ್ದಾರೆ.
ಸಿನ್ಹಾ ನೇತೃತ್ವದ ಜಮ್ಮು–ಕಾಶ್ಮೀರ ಆಡಳಿತವು ಭಯೋತ್ಪಾದಕ ಗುಂಪುಗಳೊಂದಿಗೆ ನಂಟು ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ 2020ರಿಂದ ಇದುವರೆಗೆ 85 ಸರಕಾರಿ ನೌಕರರನ್ನು ವಜಾಗೊಳಿಸಿದೆ.
ಮಂಗಳವಾರ ವಜಾಗೊಂಡವರಲ್ಲಿ ಶಿಕ್ಷಕ ಮುಹಮ್ಮದ್ ಇಷ್ಫಾಕ್, ಪ್ರಯೋಗಾಲಯ ತಂತ್ರಜ್ಞ ತಾರಿಕ್ ಅಹ್ಮದ್ ಶಾ, ಸಹಾಯಕ ಲೈನ್‌ಮ್ಯಾನ್ ಬಶೀರ್ ಅಹ್ಮದ್ ಮಿರ್, ಅರಣ್ಯ ಇಲಾಖೆಯ ಫಾರೂಕ್ ಅಹ್ಮದ್ ಭಟ್ ಮತ್ತು ಆರೋಗ್ಯ ಇಲಾಖೆಯ ಚಾಲಕ ಮುಹಮ್ಮದ್ ಯೂಸುಫ್ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಷ್ಫಾಕ್ ಮತ್ತು ಮಿರ್ ಲಷ್ಕರ್-ಎ-ತೈಬಾ (ಎಲ್‌ಇಟಿ) ಹಾಗೂ ಶಾ, ಯೂಸುಫ್ ಮತ್ತು ಭಟ್ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದರು ಎಂದು ಅವರು ಹೇಳಿದ್ದಾರೆ.
Next Story





