ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮಸೂದೆ ಅಂಗೀಕಾರ
![ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮಸೂದೆ ಅಂಗೀಕಾರ ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮಸೂದೆ ಅಂಗೀಕಾರ](https://www.varthabharati.in/h-upload/2023/12/06/1220190-whatsapp-image-2023-12-06-at-102147-pm.webp)
ಅಮಿತ್ ಶಾ | Photo: PTI
ಹೊಸದಿಲ್ಲಿ : ಜಮ್ಮು ಹಾಗೂ ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ-2023, ಜಮ್ಮು ಹಾಗೂ ಕಾಶ್ಮೀರ ಮರು ಸಂಘಟನಾ (ತಿದ್ದುಪಡಿ)ಮಸೂದೆ-2023 ಅನ್ನು ಲೋಕಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು.
ಜಮ್ಮು ಹಾಗೂ ಕಾಶ್ಮೀರದಲ್ಲಿ ಉದ್ಯೋಗ ಹಾಗೂ ಶಿಕ್ಷಣವಲ್ಲದೆ, ಜಮ್ಮು ಹಾಗೂ ಕಾಶ್ಮೀರ ವಿಧಾನ ಸಭೆಯಲ್ಲಿ ಮೀಸಲಾತಿ ಕುರಿತ ಈ ಅವಳಿ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಂಗಳವಾರ ಮಂಡಿಸಿದ್ದರು.
ಜಮ್ಮು ಹಾಗೂ ಕಾಶ್ಮೀರದಲ್ಲಿ ಚುನಾಯಿತ ಸರಕಾರ ಇಲ್ಲದೆ ಇರುವಾಗ ಈ ಮಸೂದೆ ಮಂಡನೆ ಅಸಂವಿಧಾನಿಕ ಎಂದು ಪ್ರತಿಪಕ್ಷಗಳು, ಮುಖ್ಯವಾಗಿ ಜಮ್ಮು ಹಾಗೂ ಕಾಶ್ಮೀರದ ಪ್ರಾದೇಶಿಕ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ನಡುವೆ ಅಮಿತ್ ಶಾ ಅವರು ಈ ಮಸೂದೆ ಮಂಡಿಸಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಸೂದೆಯ ಕುರಿತು ಮಾತನಾಡಿದ ಬಳಿಕ ಮಸೂದೆಯನ್ನು ಅಂಗೀಕರಿಸಲಾಯಿತು. ಜಮ್ಮು ಹಾಗೂ ಕಾಶ್ಮೀರದಲ್ಲಿ ಈ ಹಿಂದಿನ ಆಡಳಿತದಿಂದ ದಮನಕ್ಕೆ ಹಾಗೂ ವಂಚನೆಗೆ ಒಳಗಾದವರಿಗೆ ನ್ಯಾಯ ನೀಡುವ ಗುರಿಯನ್ನು ಈ ಮಸೂದೆಗಳು ಹೊಂದಿವೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಆಡಳಿತವನ್ನು ಗುರಿಯಾಗಿರಿಸಿ ವಾಗ್ದಾಳಿ ನಡೆಸಿದ ಅಮಿತ್ ಶಾ, ಮತ ಬ್ಯಾಂಕ್ ಅನ್ನು ಪರಿಗಣಸದೇ ಆರಂಭದಲ್ಲೇ ಭಯೋತ್ಪಾದನೆಯನ್ನು ನಿಗ್ರಹಿಸಿದ್ದರೆ, ಕಾಶ್ಮೀರಿ ಪಂಡಿತರು ಕಾಶ್ಮೀರ ಕಣಿವೆ ತ್ಯಜಿಸಬೇಕಾಗಿರಲಿಲ್ಲ ಎಂದರು.
ಹಿಂದುಳಿದ ವರ್ಗಗಳ ಕುರಿತು ಮಾತನಾಡುತ್ತಿರುವುದಕ್ಕೆ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡ ಅವರು, ಹಿಂದುಳಿದ ವರ್ಗದವರನ್ನು ವಿರೋಧಿಸುವ ಹಾಗೂ ಅವರ ಬೆಳವಣಿಗೆಗೆ ಅಡ್ಡಿಯಾಗುವ ಪಕ್ಷ ಇದೆ ಎಂದಾದರೆ ಅದು ಕಾಂಗ್ರೆಸ್ ಪಕ್ಷ ಎಂದು ಹೇಳಿದರು.