ಜಮ್ಮುಕಾಶ್ಮೀರ | ಡಿಸಿಎಂ ಪ್ರಯಾಣಿಸುತ್ತಿದ್ದ ವಾಹನದ ಬ್ರೇಕ್ ಫೈಲ್: ತಪ್ಪಿದ ಅನಾಹುತ

Photo: X/@OfficeofDYCMJK
ಪೂಂಚ್: ಜಮ್ಮು ಮತ್ತು ಕಾಶ್ಮೀರದ ಉಪಮುಖ್ಯಮಂತ್ರಿ ಸುರಿಂದರ್ ಚೌಧರಿ ಅವರು ಗುರುವಾರ ಪೂಂಚ್ ಜಿಲ್ಲೆಯ ಮೊಘಲ್ ರಸ್ತೆಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಚೌಧರಿ ಅವರು ಪಿರ್ ಕಿ ಗಾಲಿಯಿಂದ ಪಸ್ಸಾನ್ ಕಡೆಗೆ ಬುಲೆಟ್ ಪ್ರೂಫ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಒಮ್ಮೆಲೇ ಬ್ರೇಕ್ ವೈಫಲ್ಯ ಉಂಟಾಗಿದೆ. ವಾಹನದ ಚಾಲಕ ಹ್ಯಾಂಡ್ ಬ್ರೇಕ್ ಬಳಸಿ ವೇಗವಾಗಿ ಚಲಿಸುತ್ತಿದ್ದ ವಾಹನವನ್ನು ನಿಲ್ಲಿಸಲು ಯಶಸ್ವಿಯಾದ್ದರಿಂದ, ಸಂಭವಿಸಬಹುದಾದ ದೊಡ್ಡ ಅಪಘಾತ ತಪ್ಪಿದೆ ಎಂದು ತಿಳಿದು ಬಂದಿದೆ.
ನನಗೆ ಹಳೆಯ ವಾಹನಗಳನ್ನು ನೀಡಿದ್ದಾರೆ. ನನಗೆ Z-ಪ್ಲಸ್ ಭದ್ರತೆ ಇದ್ದರೂ, ವಾಹನಗಳನ್ನು ಬದಲಾಯಿಸುವಂತೆ ಡಿಜಿಪಿ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಪತ್ರ ಬರೆದಿದ್ದೇನೆ. ಆದರೆ, ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಚೌಧರಿ ಆರೋಪಿಸಿದರು. “ಪೊಲೀಸ್ ಅಧಿಕಾರಿಗಳಿಗೆ ಹೊಸ ವಾಹನಗಳಿವೆ. ಇಂತಹ ಘಟನೆಗಳು ಹಲವು ಬಾರಿ ಸಂಭವಿಸಿದೆ” ಎಂದು ಅವರು ಹೇಳಿದರು.
ಅಪಘಾತದಿಂದ ಪಾರಾದ ನಂತರ ಚೌಧರಿ ಮಂಡಿಯಲ್ಲಿರುವ ಬುದ್ಧ ಅಮರನಾಥ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. “ಜಮ್ಮು ಮತ್ತು ಕಾಶ್ಮೀರದ ಶಾಂತಿ, ಪ್ರಗತಿ, ಸಮೃದ್ಧಿ ಹಾಗೂ ರಾಜ್ಯ ಸ್ಥಾನಮಾನ ಪುನಃ ಸಿಗುವಂತಾಗಲಿ ಎಂದು ಪ್ರಾರ್ಥಿಸಿದ್ದೇನೆ,” ಎಂದು ಅವರು ಹೇಳಿದರು.







