ಜಮ್ಮುಕಾಶ್ಮೀರ ಚುನಾವಣೆ | ಶೇ.59ರಷ್ಟು ಮತದಾನ

PC : PTI
ಹೊಸದಿಲ್ಲಿ : ಜಮ್ಮುಕಾಶ್ಮೀರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಬುಧವಾರ ನಡೆಯಿತು. ಶೇ.59ರಷ್ಚು ಮತದಾನವಾಗಿರುವುದಾಗಿ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಜಮ್ಮುಕಾಶ್ಮೀರದ 90 ವಿಧಾನಸಭಾ ಕ್ಷೇತ್ರಗಳ ಪೈಕಿ ಬುಧವಾರ 24 ಕ್ಷೇತ್ರಗಳಿಗೆ ಮತದಾನವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ.
ಇಂದರ್ವಾಲ್ ಕ್ಷೇತ್ರದಲ್ಲಿ ಗರಿಷ್ಠ ಮತದಾನವಾಗಿದ್ದು 80.06ರಷ್ಚು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಪಾಡ್ಡೆರ್-ನಾಗಸೇನಿಯಲ್ಲಿ ಶೇ. 76.80 ಹಾಗೂ ಕಿಶ್ತವಾರ್ನಲ್ಲಿ ಶೇ.75.04ರಷ್ಚು ಮತದಾನವಾಗಿದೆ. ದೋಡಾದಲ್ಲಿಯೂ ಉತ್ತಮ ಮತದಾನವಾಗಿದ್ದು, ಶೇ.74.14ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಪಹಲ್ಗಾಮ್ನಲ್ಲಿ ಅತ್ಯಧಿಕ ಶೇ.67.786ರಷ್ಟು ಮತದಾನವಾಗಿದೆ. ಡಿ.ಎಚ್.ಪೋರಾದಲ್ಲಿ ಶೇ.65,21 ಹಾಗೂ ಕುಲಗಾಮ್ ಶೇ.59.98, ಕೋಕರ್ನಾಗ್ ಶೇ.58 ಹಾಗೂ ಡೂರ್ ಕ್ಷೇತ್ರದಲ್ಲಿ ಶೇ.57.90ರಷ್ಟು ಮತದಾನವಾಗಿದೆ.
ತ್ರಾಲ್ ವಲಯದಲ್ಲಿ ಕನಿಷ್ಠ ಶೇ.40.58ರಷ್ಟು ಮತದಾನ ದಾಖಲಾಗಿದೆ. ಪುಲ್ವಾಮಾ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣವು ಶೇ.50ರ ಗಡಿಯನ್ನು ದಾಟಿಲ್ಲವೆಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಸುಮಾರು 10 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜಮ್ಮುಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆದಿದೆ. 2019ರಲ್ಲಿ ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ, ಅದನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ ಬಳಿಕ ನಡೆದ ಮೊತ್ತ ಮೊದಲ ಬಾರಿಗೆ ಮತದಾನವಾಗಿದೆ. ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಪುತ್ರಿ ಇತಿಝಾ ಮುಪ್ತಿ ಸ್ಪರ್ಧಿಸಿರುವ ಶ್ರೀಗುಫ್ವಾರ-ಬ್ರಿಜ್ಬೆಹರಾ ಇಂದು ಮತದಾನ ನಡೆದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲೊಂದಾಗಿದೆ.
ಬುಧವಾರ ನಡೆದ ಚುನಾವಣೆಯಲ್ಲಿ ಸಿಪಿಎಂ ನಾಯಕ ಮೊಹಮ್ಮದ್ ಯೂಸುಫ್ ತಾರಿಗಾಮಿ (ಕುಲಗಾಮ್), ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ಅಹ್ಮದ್ ಮೀರ್ (ಡೂರು), ನ್ಯಾಶನಲ್ ಕಾನ್ಪರೆನ್ಸ್ ನಾಯಕಿ ಸಕೀನಾ ಇಟ್ಟೂ (ದಮ್ಹಾಲ್ ಹಾಜಿಪೋರಾ) ಅವರ ರಾಜಕೀಯ ಭವಿಷ್ಯ ಮತಯಂತ್ರಗಳನ್ನು ಸೇರಿದೆ.
ಜಮ್ಮು ಪ್ರಾಂತದಲ್ಲಿ ಮಾಜಿ ಸಚಿವರಾದ ಸಜ್ದ್ ಕಿಚ್ಲೂ ( ಎನ್ಸಿ), ಖಾಲಿದ್ ನಾಜಿದ್ ಸುಹರ್ವಾರ್ಡಿ (ಎನ್ಸಿ), ಅಬ್ದು ಲ್ ಮಜೀದ್ ವಾನಿ (ಡಿಪಿಎಪಿ),ಸುನೀಲ್ ಶರ್ಮಾ (ಬಿಜೆಪಿ), ಶಕ್ತಿ ರಾಜ್ ಪರಿಹಾರ್ (ದೋಡಾ ಪಶ್ಚಿಮ) ಹಾಗೂ ಗುಲಾಂ ಮೊಹಮ್ಮದ್ ಸರೂರಿ ಅವರು ಕಣದಲ್ಲಿರುವ ಪ್ರಮುಖರು.
ಮೊದಲ ಹಂತದ ಚುನಾವಣೆಯಲ್ಲಿ 90 ಮಂದಿ ಪಕ್ಷೇತರರು ಸೇರಿದಂತೆ 219 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಚುನಾವಣಾ ಮೈತ್ರಿ ಏರ್ಪಡಿಸಿಕೊಂಡಿದ್ದರೂ, ಬನಿಹಾಲ್, ಭದೆರ್ವಾಹ್ ಹಾಗೂ ದೋಡಾದಲ್ಲಿ ಸ್ನೇಹಯುತ ಸ್ಪರ್ಧೆಯನ್ನು ನಡೆಸುತ್ತಿವೆ.
ಗರಿಷ್ಠ ಸಂಖ್ಯೆಯ ಮತದಾರರು ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಜಮ್ಮುಕಾಶ್ಮೀರ ಪೊಲೀಸರು ವ್ಯಾಪಕ ಬಂದೋಬಸ್ ಏರ್ಪ ಡಿಸಿಈದ್ದರು. ಕೇಂದ್ರೀಯ ಸಶಸ್ತ್ರ ಅರೆ ಸೈನಿಕ ಪಡೆ (ಸಿಎಪಿಎಫ್), ಜಮ್ಮುಕಾಶ್ಮೀರ ಸಶಸ್ತ್ರ ಪೊಲೀಸರು ಕೂಡಾ ಭದ್ರತಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದರು.
ಜಮ್ಮುಕಾಶ್ಮೀರ ವಿಧಾನಸಭೆಯ ಎರಡನೆ ಹಂತದ ಚುನಾವಣೆಯು ಸೆ.25ರಂದು 26 ಕ್ಷೇತ್ರಗಳಿಗೆ ನಡೆಯಲಿದೆ.







