ಶಾಂತಿಯಿಂದ ರಾತ್ರಿಯನ್ನು ಕಳೆದ ಜಮ್ಮುಕಾಶ್ಮೀರ

PC : X
ಹೊಸದಿಲ್ಲಿ: ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನೆಗಳ ನಡುವೆ ಯಾವುದೇ ಸಂಘರ್ಷ ನಡೆದಿಲ್ಲ, ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳ ಶಬ್ದಗಳಿಲ್ಲದೆ ಜಮ್ಮುಕಾಶ್ಮೀರವು ರವಿವಾರ ರಾತ್ರಿಯನ್ನು ಶಾಂತಿಯಿಂದ ಕಳೆದಿದೆ ಎಂದು ಭಾರತೀಯ ಸೇನೆಯು ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.
ಯಾವದೇ ಘಟನೆ ವರದಿಯಾಗಿಲ್ಲ,ಇದು ಇತ್ತೀಚಿನ ದಿನಗಳಲ್ಲಿ ಮೊದಲ ಶಾಂತಿಯುತ ರಾತ್ರಿಯಾಗಿದೆ ಎಂದು ಸೇನೆಯು ಹೇಳಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ಬಳಿಕ ಉಭಯ ದೇಶಗಳ ನಡುವೆ ಮಿಲಿಟರಿ ಸಂಘರ್ಷದಿಂದಾಗಿ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿ ಹೆಚ್ಚಿನ ಉದ್ವಿಗ್ನತೆಗೆ ಸಾಕ್ಷಿಯಾದ ಬಳಿಕ ಜಮ್ಮುಕಾಶ್ಮೀರದಲ್ಲಿ ಶಾಂತಿ ಮರಳಿದೆ. ಮೇ 10ರಂದು ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು.
ಆದರೆ ಅದೇ ದಿನ ರಾತ್ರಿ ಜಮ್ಮುಕಾಶ್ಮೀರದಲ್ಲಿ ಪಾಕಿಸ್ತಾನದ ಡ್ರೋನ್ಗಳು ಕಾಣಿಸಿಕೊಂಡಿದ್ದವು. ಭಾರತವು ಪ್ರತೀಕಾರದ ಎಚ್ಚರಿಕೆ ನೀಡಿದ ಬಳಿಕ ಪಾಕ್ ತನ್ನ ಉದ್ಧಟತನವನ್ನು ನಿಲ್ಲಿಸಿತ್ತು.





