ಜಮ್ಮು-ಕಾಶ್ಮೀರ: ನೂತನ ರಾಜಕೀಯ ಒಕ್ಕೂಟ ‘‘ಪೀಪಲ್ಸ್ ಅಲಯನ್ಸ್ ಫಾರ್ ಚೇಜ್’’ ಆರಂಭ

PC : knskashmir.com
ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದಲ್ಲಿ ವಿಧಾನ ಸಭೆ ಚುನಾವಣೆ ನಡೆದ ಸರಿಸುಮಾರು 8 ತಿಂಗಳ ಬಳಿಕ ಪೀಪಲ್ಸ್ ಕಾನ್ಫರೆನ್ಸ್ (ಪಿಸಿ), ಪೀಪಲ್ಸ್ ಡೆಮಾಕ್ರೆಟಿಕ್ ಫ್ರಂಟ್ (ಪಿಡಿಎಫ್) ಹಾಗೂ ಜಮಾತ್ ಎ ಇಸ್ಲಾಮಿ ನಾಯಕರ ಬೆಂಬಲದಿಂದ ಜಸ್ಟಿಸ್ ಆ್ಯಂಡ್ ಡೆವಲಪ್ಮೆಂಟ್ ಫ್ರಂಟ್ ನೂತನ ರಾಜಕೀಯ ಒಕ್ಕೂಟ ‘‘ಪೀಪಲ್ಸ್ ಅಲಯನ್ಸ್ ಫಾರ್ ಚೇಂಜ್’’ ಅನ್ನು ಆರಂಭಿಸಿದೆ.
ಪೀಪಲ್ಸ್ ಕಾನ್ಫರೆನ್ಸ್ನ ವರಿಷ್ಠ ಸಜ್ಜಾದ್ ಗಣಿ ಲೋನೆ, ಪಿಡಿಎಫ್ ನಾಯಕರು ಹಾಗೂ ಜಸ್ಟಿಸ್ ಹಾಗೂ ಡೆವೆಲಪ್ಮೆಂಟ್ ಫ್ರಂಟ್ ನಾಯಕರು ಸೋಮವಾರ ಇಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದಾರೆ.
ನೂತನ ಮೈತ್ರಿಕೂಟ ಜನರ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಸಂಘಟಿತವಾಗಿ ಕಾರ್ಯ ನಿರ್ವಹಿಸಲಿದೆ ಎಂದು ನಾಯಕರು ತಿಳಿಸಿದ್ದಾರೆ. ಈ ಮೈತ್ರಿಕೂಟದ ಸಾಂಸ್ಥಿಕ ರಚನೆಯನ್ನು ಮಿತ್ರ ಪಕ್ಷಗಳು ಒಟ್ಟಾಗಿ ಘೋಷಿಸಲಿವೆ ಎಂದು ಅವರು ತಿಳಿಸಿದ್ದಾರೆ.
ಈ ಮೈತ್ರಿಕೂಟ ಕೇಂದ್ರಾಡಳಿತ ಪ್ರದೇಶದಲ್ಲಿ ಪರ್ಯಾಯ ರಾಜಕೀಯ ದೃಷ್ಟಿಕೋನವನ್ನು ನೀಡುವ ಹಾಗೂ ನಾಯಕತ್ವ, ಉತ್ತರದಾಯಿಯ ಬಿಕ್ಕಟ್ಟನ್ನು ಪರಿಹರಿಸುವ ಉದ್ದೇಶವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ನೂತನ ಮೈತ್ರಿಕೂಟ ಅಪಾರ ಸಂಕಟವನ್ನು ಸಹಿಸಿಕೊಂಡಿರುವ ಜನರಿಗೆ ಕಾರ್ಯಸಾಧುವಾದ ಪರ್ಯಾಯವನ್ನು ನೀಡಲಿದೆ ಎಂದು ಲೋನೆ ತಿಳಿಸಿದ್ದಾರೆ. ‘‘ಬದಲಾವಣೆಗಳಿಗೆ ನಾವು ಬದ್ಧರಾಗಿದ್ದೇವೆ. ಪ್ರಸಕ್ತ ರಾಜಕೀಯ ಪರಿಸ್ಥಿತಿ ಬಂಜರು ಭೂಮಿಯಂತಾಗಿದೆ. ನಮ್ಮ ಮೈತ್ರಿಕೂಟ ಕಾರ್ಯಸಾಧುವಾದ ಪರ್ಯಾಯವನ್ನು ನೀಡಲಿದೆ’’ ಎಂದು ಅವರು ತಿಳಿಸಿದ್ದಾರೆ.
ಈ ಘೋಷಣೆಯ ಸಂದರ್ಭ ಹಿರಿಯ ಶಿಯಾ ಮುಸ್ಲಿಂ ನಾಯಕ ಹಾಗೂ ಪೀಪಲ್ಸ್ ಕಾನ್ಪರೆನ್ಸ್ ನ ಪ್ರಮುಖ ನಾಯಕ ಇಮ್ರಾನ್ ರಝಾ ಅನ್ಸಾರಿ ಕೂಡ ಪಾಲ್ಗೊಂಡಿದ್ದರು.







