ಮಹಿಳೆಯರಿಗೆ ಹಣ ವರ್ಗಾಯಿಸಿದ್ದರಿಂದ ಬಿಹಾರದಲ್ಲಿ ಎನ್ಡಿಎಗೆ ಗೆಲುವು: ಜನ್ ಸುರಾಜ್ ಪಕ್ಷ

Photo credit: PTI
ಪಾಟ್ನಾ: ಬಿಹಾರ ಚುನಾವಣೆಗೂ ಮುನ್ನ ಮಹಿಳೆಯರಿಗೆ ಹಣ ವರ್ಗಾಯಿಸಿದ್ಧರಿಂದ ಎನ್ಡಿಎ ಮೈತ್ರಿಕೂಟ ಗೆಲುವು ಸಾಧಿಸಿದೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷ ಆರೋಪಿಸಿದೆ.
ಬಿಹಾರ ವಿಧಾನಸಭಾ ಚುನಾವಣೆಯ ಘೋಷಣೆಗೂ ಮುನ್ನ, ಬಿಹಾರದ ಪ್ರತಿ ಮಹಿಳೆಯರ ಖಾತೆಗೆ ತಲಾ 10,000 ರೂ.ಅನ್ನು ವರ್ಗಾಯಿಸಲಾಗಿತ್ತು. ಇದಕ್ಕಾಗಿ 40,000 ಕೋಟಿ ರೂ. ಹಣವನ್ನು ಬಿಡುಗಡೆಗೊಳಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಜನ್ ಸೂರಜ್ ಪಕ್ಷದ ರಾಷ್ಟ್ರಾಧ್ಯಕ್ಷ ಉದಯ್ ಸಿಂಗ್, "ಮಹಿಳೆಯರ ಖಾತೆಗಳಿಗೆ ಹಣ ಜಮಾ ಮಾಡುವ ಮೂಲಕ, ಚುನಾವಣೆಗಾಗಿ ಸರಕಾರ ಜನರಿಗೆ ಲಂಚ ನೀಡಿದೆ. ಆ ಮೂಲಕ, ಮತದಾರರನ್ನು ಖರೀದಿ ಮಾಡಲಾಗಿದೆ. ಅಧಿಕಾರಕ್ಕೆ ಬಂದ ನಂತರ ಬಾಕಿ ಉಳಿದಿರುವ ಎರಡು ಲಕ್ಷ ರೂ. ಹಣವನ್ನು ಮಹಿಳೆಯರ ಖಾತೆಗಳಿಗೆ ವರ್ಗಾಯಿಸಲಾಗುತ್ತದೆಯೇ ಕಾದು ನೋಡಬೇಕಿದೆ" ಎಂದು ಹೇಳಿದ್ದಾರೆ.
"ವಿಧಾನಸಭಾ ಚುನಾವಣಾ ಫಲಿತಾಂಶದಿಂದ ನಮಗೆ ನಿರಾಸೆಯಾಗಿದೆ. ಆದರೆ, ನಾವು ಹತಾಶರಾಗಿಲ್ಲ. ನಾವು ಒಂದು ಕ್ಷೇತ್ರದಲ್ಲೂ ಗೆಲ್ಲಲಾಗದಿರಬಹುದು. ಹೀಗಿದ್ದೂ, ಎನ್ಡಿಎಯನ್ನು ವಿರೋಧಿಸುವ ಕೆಲಸ ಮುಂದುವರಿಸುತ್ತೇವೆ" ಎಂದು ಅವರು ಘೋಷಿಸಿದ್ದಾರೆ.
ಬಿಹಾರ ರಾಜ್ಯದಲ್ಲಿನ ಪ್ರಮುಖ ಸಮಸ್ಯೆಗಳಾದ ನಿರುದ್ಯೋಗ, ವಲಸೆಯ ಕುರಿತು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸೂರಜ್ ಪಕ್ಷ ಪ್ರಚಾರ ಮಾಡಿದರೂ, ಯಾವುದೇ ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಗಿದೆ.





