ಮರಾಠಾ ಮೀಸಲಾತಿ ಕುರಿತು ಜಾರಂಗೆ ಭರವಸೆ; ಇತರ ಹಿಂದುಳಿದ ನಾಯಕರ ಅಸಮಾಧಾನ

ಮನೋಜ್ ಜರಾಂ | PC : ANI
ಛತ್ರಪತಿ ಸಂಭಾಜಿನಗರ್(ಮಹಾರಾಷ್ಟ್ರ), ಸೆ. 3: ಮರಾಠಾವಾಡ ಹಾಗೂ ಪಶ್ಚಿಮ ಮಹಾರಾಷ್ಟ್ರದ ಮರಾಠಾ ಸಮುದಾಯ ಇನ್ನು ಮುಂದೆ ಮೀಸಲಾತಿ ಪಡೆಯಲಿದೆ ಎಂದು ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಅವರು ಬುಧವಾರ ಹೇಳಿದ್ದಾರೆ.
ಮರಾಠಾ ಮೀಸಲಾತಿ ಕುರಿತು ಸರಕಾರದ ನಿರ್ಧಾರದ ಬಗ್ಗೆ ಇತರ ಹಿಂದುಳಿದ ನಾಯಕರು ಅಸಾಮಾಧಾನ ವ್ಯಕ್ತಪಡಿಸಿದ ಹಾಗೂ ಹೋರಾಟದ ಎಚ್ಚರಿಕೆ ನೀಡಿರುವ ನಡುವೆಯೇ ಜರಾಂಗೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತರ ಹಿಂದುಳಿದ ವರ್ಗಗಳ (ಒಬಿಸಿ) ಪ್ರಮುಖ ನಾಯಕರಾಗಿರುವ ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್ ರಾಜ್ಯ ಸಂಪುಟ ಸಭೆಯಲ್ಲಿ ಪಾಲ್ಗೊಂಡಿಲ್ಲ. ಇದು ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಸೂಚಿಸಿದೆ.
‘‘ನಾವು ಗೆಲುವು ಸಾಧಿಸಿದ್ದೇವೆ. ಈ ಗೆಲುವಿನ ಕೀರ್ತಿ ಮರಾಠಾ ಸಮುದಾಯಕ್ಕೆ ಸಲ್ಲುತ್ತದೆ. ಮರಾಠಾವಾಡ ಹಾಗೂ ಪಶ್ಚಿಮ ಮಹಾರಾಷ್ಟ್ರದ ಮರಾಠಾ ಜನರು ಇನ್ನು ಮುಂದೆ ಮೀಸಲಾತಿ ಪಡೆಯಲಿದ್ದಾರೆ’’ ಎಂದು ಛತ್ರಪತಿ ಸಂಭಾಜಿನಗರ್ ನ ಆಸ್ಪತ್ರೆಯಿಂದ ಜರಾಂಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಉಪವಾಸ ಮುಷ್ಕರ ಪೂರ್ಣಗೊಳಿಸಿದ ಬಳಿಕ ಮುಂಬೈಯಿಂದ ಹಿಂದಿರುಗಿರುವ 43 ವರ್ಷದ ಮನೋಜ್ ಜರಾಂಗೆ ನಿರ್ಜಲೀಕರಣ ಹಾಗೂ ರಕ್ತದ ಕಡಿಮೆ ಸಕ್ಕರೆ ಪ್ರಮಾಣದ ಹಿನ್ನೆಲೆಯಲ್ಲಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.







