ಮಧ್ಯಪ್ರದೇಶ | ಕಳಪೆ ಆಹಾರ, ಮಲಿನ ನೀರಿನಿಂದಾಗಿ ಕ್ಯಾಂಪಸ್ ನಲ್ಲಿ ವ್ಯಾಪಿಸಿದ ಹಳದಿಕಾಮಾಲೆ; ಉದ್ರಿಕ್ತ ವಿದ್ಯಾರ್ಥಿಗಳಿಂದ ಹಿಂಸಾಚಾರ, ವಾಹನಗಳಿಗೆ ಬೆಂಕಿ

Photo Credit : NDTV
ಭೋಪಾಲ,ನ.26: ಮಧ್ಯಪ್ರದೇಶದ ಸೆಹೋರ್ನ ವಿಐಟಿ ವಿಶ್ವವಿದ್ಯಾನಿಲಯದಲ್ಲಿ ಕಳಪೆದರ್ಜೆಯ ಆಹಾರ ಹಾಗೂ ಮಲಿನಗೊಂಡ ನೀರಿನ ಸೇವನೆಯಿಂದಾಗಿ ಕ್ಯಾಂಪಸ್ ನಲ್ಲಿ ಹಳದಿಕಾಮಾಲೆ ರೋಗ ಹರಡಿದೆಯೆಂದು ಆರೋಪಿಸಿ ವಿದ್ಯಾರ್ಥಿಗಳು ಬುಧವಾರ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಉದ್ರಿಕ್ತ ವಿದ್ಯಾರ್ಥಿಗಳು ಬಸ್ಗಳು ಹಾಗೂ ಕಾರುಗಳಿಗೆ ಬೆಂಕಿ ಹಚ್ಚಿದ್ದು, ಆ್ಯಂಬುಲೆನ್ಸ್ ಒಂದನ್ನು ಜಖಂಗೊಳಿಸಿದ್ದಾರೆ. ವಿಶ್ವವಿದ್ಯಾನಿಲಯ ಕ್ಯಾಂಪಸ್ ನ ಹಲವು ವಿಭಾಗಗಳಿಗೆ ಹಾನಿಯೆಸಗಿದ್ದಾರೆ. ಹಿಂಸಾಚಾರವನ್ನು ನಿಯಂತ್ರಿಸಲು ಐದು ಪೊಲೀಸ್ ಠಾಣೆಗಳ ಪೊಲೀಸ್ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಉದ್ವಿಗ್ನತೆ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯವು ನವೆಂಬರ್ 30ರವರೆಗೆ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.
ಕಳಪೆ ಆಹಾರ ಹಾಗೂ ಅಸುರಕ್ಷಿತವಾದ ಕುಡಿಯುವ ನೀರು ವಿವಿ ಕ್ಯಾಂಪಸ್ ನಲ್ಲಿ ವ್ಯಾಪಕವಾಗಿ ಅಸ್ವಸ್ಥತೆಗೆ ಕಾರಣವಾಗಿದೆಯೆಂದು ವಿದ್ಯಾರ್ಥಿಗಳು ದೂರಿದ್ದಾರೆ. ಹಲವು ವಿದ್ಯಾರ್ಥಿಗಳು ಹಳದಿ ಕಾಮಾಲೆ ಪೀಡಿತರಾಗಿದ್ದಾರೆಂದು ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದಾಗ ಹಾಸ್ಟೆಲ್ ವಾರ್ಡನ್ ಗಳು ಹಾಗೂ ಭದ್ರತಾ ಕಾವಲುಗಾರರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ದೂರು ನೀಡದಂತೆ ಒತ್ತಡ ಹೇರಿದ್ದರು. ವಿಶ್ವವಿದ್ಯಾನಿಲಯದ ಆಡಳಿತವರ್ಗದ ಜೊತೆ ಈ ಕುರಿತು ಮಾತನಾಡಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ತಮ್ಮ ದೂರುಗಳಿಗೆ ಯಾವುದೇ ಸ್ಪಂದನೆ ದೊರೆಯದೇ ಇದ್ದಾಗ, ಸುಮಾರು ನಾಲ್ಕು ಸಾವಿರದಷ್ಟಿದ್ದ ವಿದ್ಯಾರ್ಥಿಗಳಿಗೆ ಹಿಂಸಾಚಾರಕ್ಕಿಳಿದಿದ್ದಾರೆ. ಅವರು ಬಸ್, ಮೋಟಾರ್ ಸೈಕಲ್ ಹಾಗೂ ಆ್ಯಂಬುಲೆನ್ಸ್ಗೆ ಬೆಂಕಿ ಹಚ್ಚಿದ್ದಾರೆ. ಹಾಸ್ಟೆಲ್ನ ಕಿಟಕಿಗಾಜುಗಳು ಮತ್ತು ಕ್ಯಾಂಪಸ್ ನಲ್ಲಿರುವ ಹಲವಾರು ಸ್ಥಾಪನೆಗಳಿಗೆ ಹಾನಿಯೆಸಗಿದ್ದಾರೆ.
ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಹಾಸ್ಟೆಲ್ನಲ್ಲಿ ಕಳಪೆ ದರ್ಜೆಯ ಆಹಾರ ಪೂರೈಕೆ ಹಾಗೂ ರೋಗ ಹರಡುವಿಕೆ ಮತ್ತು ಭದ್ರತಾಸಿಬ್ಬಂದಿಗಳಿಂದ ಹಲ್ಲೆ, ವ್ಯಾಪಕ ಗಲಭೆ ಸೇರಿದಂತೆ ಎಲ್ಲಾ ಘಟನೆಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.







