ಪಾಕಿಸ್ತಾನಕ್ಕಿಂತ ನರಕಕ್ಕೆ ಹೋಗುವುದನ್ನೇ ನಾನು ಆಯ್ದುಕೊಳ್ಳುತ್ತೇನೆ: ಜಾವೇದ್ ಅಖ್ತರ್

ಜಾವೇದ್ ಅಖ್ತರ್
ಮುಂಬೈ: ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಉದ್ವಿಗ್ನತೆಗಳ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿರುವ ಕವಿ ಹಾಗೂ ಚಿತ್ರಕಥೆ ಲೇಖಕ ಜಾವೇದ್ ಅಖ್ತರ್ ಅವರು, ಪಾಕಿಸ್ತಾನಕ್ಕೆ ಅಥವಾ ನರಕಕ್ಕೆ ಹೋಗುವುದು ಹೀಗೆ ಎರಡೇ ಆಯ್ಕೆಗಳು ತನ್ನ ಮುಂದಿದ್ದರೆ ತಾನು ನರಕವನ್ನೇ ಆಯ್ದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಶನಿವಾರ ಇಲ್ಲಿ ಪುಸ್ತಕವೊಂದರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಖ್ತರ್, ತಾನು ಬಹಳಷ್ಟು ಪ್ರಶಂಸೆಗಳನ್ನು ಪಡೆಯುತ್ತಿದ್ದೇನೆ,ಆದರೆ ಇದೇ ವೇಳೆ ‘ಎರಡೂ ಕಡೆಗಳ’ ಉಗ್ರಗಾಮಿಗಳಿಂದ ನಿಂದನೆಗಳು ಮತ್ತು ಬೈಗುಳಗಳನ್ನೂ ತಾನು ಸ್ವೀಕರಿಸುತ್ತಿದ್ದೇನೆ ಎಂದು ಹೇಳಿದರು. ‘ಎರಡೂ ಕಡೆಗಳ’ ಕುರಿತು ವಿವರಿಸುವ ಗೋಜಿಗೆ ಅವರು ಹೋಗಲಿಲ್ಲ.
‘ನೀವು ಒಂದು ಕಡೆಯ ಪರವಾಗಿ ಮಾತನಾಡಿದರೆ ನೀವು ಇನ್ನೊಂದು ಕಡೆಯವರನ್ನು ಮಾತ್ರ ಅಸಮಾಧಾನಗೊಳಿಸುತ್ತೀರಿ. ಆದರೆ ನೀವು ಪ್ರತಿಯೊಬ್ಬರ ಪರವಾಗಿ ಮಾತನಾಡಿದರೆ ನೀವು ಇನ್ನೂ ಹೆಚ್ಚಿನ ಜನರನ್ನು ಅಸಮಾಧಾನಗೊಳಿಸುತ್ತೀರಿ. ಎರಡೂ ಕಡೆಗಳಿಂದಲೂ ನನ್ನ ವಿರುದ್ಧ ನಿಂದನೆಗಳ ಮಹಾಪೂರವೇ ಬಂದಿರುವ ನನ್ನ ಟ್ವಿಟರ್ ಮತ್ತು ವಾಟ್ಸ್ಆ್ಯಪ್ಗಳನ್ನು ನಾನು ನಿಮಗೆ ತೋರಿಸಬಲ್ಲೆ. ಬಹಳಷ್ಟು ಜನರು ನನ್ನನ್ನು ಮೆಚ್ಚುತ್ತಾರೆ,ಹೊಗಳುತ್ತಾರೆ ಮತ್ತು ನನ್ನ ಉತ್ಸಾಹವನ್ನು ಹೆಚ್ಚಿಸುತ್ತಾರೆ. ಆದರೆ ಎರಡೂ ಕಡೆಗಳ ಉಗ್ರಗಾಮಿಗಳು ನನ್ನನ್ನು ಶಪಿಸುತ್ತಾರೆ ಎನ್ನುವುದೂ ನಿಜ. ಅದು ಹೀಗೆಯೇ ಇರಬೇಕು, ಏಕೆಂದರೆ ಒಂದು ಕಡೆಯವರು ನನ್ನನ್ನು ನಿಂದಿಸುವುದನ್ನು ನಿಲ್ಲಿಸಿದರೆ ನಾನೇನು ತಪ್ಪು ಮಾಡಿದ್ದೇನೆ ಎಂಬ ಅಚ್ಚರಿ ನನಗೆ ಕಾಡುತ್ತದೆ ’ ಎಂದು ಜಾವೇದ್ ವ್ಯಂಗ್ಯವಾಡಿದರು.
‘‘ನೀನು ‘ಕಾಫಿರ್’ ಮತ್ತು ನೀನು ‘ಜಹನ್ನುಮ್(ನರಕ)’ಗೆ ಹೋಗುತ್ತಿ ಎಂದು ಒಂದು ಕಡೆಯವರು ನನಗೆ ಹೇಳುತ್ತಾರೆ. ಇನ್ನೊಂದು ಕಡೆಯವರು ನೀನು ಜಿಹಾದಿ ಮತ್ತು ಪಾಕಿಸ್ತಾನಕ್ಕೆ ಹೋಗಬೇಕು ಎನ್ನುತ್ತಾರೆ. ಈಗ ಇವೆರಡೇ ನನ್ನ ಮುಂದಿರುವ ಆಯ್ಕೆಗಳಾದರೆ ನಾನು ನರಕಕ್ಕೆ ಹೋಗುವುದಕ್ಕೆ ಆದ್ಯತೆ ನೀಡುತ್ತೇನೆ. ನಾನು ಮುಂಬೈಗೆ ಬಂದಾಗ ನನಗೆ 19 ವರ್ಷವಾಗಿತ್ತು ಮತ್ತು ನಾನು ಈಗ ಏನಾಗಿದ್ದೇನೆಯೋ ಅದು ಈ ನಗರ ಮತ್ತು ಮಹಾರಾಷ್ಟ್ರದಿಂದಾಗಿ’’ ಎಂದು ಅವರು ಹೇಳಿದರು.
ಈ ತಿಂಗಳ ಆರಂಭದಲ್ಲಿ ಅಖ್ತರ್, ಕಾಶ್ಮೀರಿಗಳು ಹೃದಯದಲ್ಲಿ ಪಾಕಿಸ್ತಾನಿಗಳಾಗಿದ್ದಾರೆ ಎಂಬ ಅಪಪ್ರಚಾರಕ್ಕಾಗಿ ಪಾಕಿಸ್ತಾನವನ್ನು ಖಂಡಿಸಿದ್ದರು.
‘ಇದು ಅಪ್ಪಟ ಸುಳ್ಳು. ಸ್ವಾತಂತ್ರ್ಯದ ಬಳಿಕ ಪಾಕಿಸ್ತಾನವು ಕಾಶ್ಮೀರದ ಮೇಲೆ ದಾಳಿ ನಡೆಸಿದಾಗ ಕಾಶ್ಮೀರಿಗಳು ಅವರನ್ನು ಮೂರು ದಿನಗಳ ಕಾಲ ತಡೆದಿದ್ದರು. ಆ ಬಳಿಕವಷ್ಟೇ ನಮ್ಮ ಸೇನೆಯು ಅಲ್ಲಿಗೆ ತಲುಪಿತ್ತು. ಸತ್ಯವೇನೆಂದರೆ ಭಾರತವಿಲ್ಲದೆ ಅವರು(ಕಾಶ್ಮೀರಿಗಳು)ಬದುಕಲು ಸಾಧ್ಯವಿಲ್ಲ. ಪಹಲ್ಗಾಮ್ನಲ್ಲಿ ಸಂಭವಿಸಿರುವುದು ಅವರಿಗೆ ಅತ್ಯಂತ ಹೆಚ್ಚಿನ ನೋವನ್ನುಂಟು ಮಾಡಿದೆ. ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಕಾಶ್ಮೀರಿಗಳು ಭಾರತೀಯರಾಗಿದ್ದಾರೆ ಮತ್ತು ಅವರ ಪೈಕಿ ಶೇ.99ರಷ್ಟು ಜನರು ಭಾರತಕ್ಕೆ ನಿಷ್ಠರಾಗಿದ್ದಾರೆ ’ ಎಂದು ಅಖ್ತರ್ ಹೇಳಿದ್ದರು.







