ಬಹುಕೋಟಿ ವಂಚನೆ ಪ್ರಕರಣ | ಖ್ಯಾತ ಕೇಶ ವಿನ್ಯಾಸಗಾರ ಜಾವೇದ್ ಹಬೀಬ್ ವಿರುದ್ಧ ಲುಕೌಟ್ ನೋಟಿಸ್

ಜಾವೇದ್ ಹಬೀಬ್ | Photo Credit : NDTV
ಲಕ್ನೊ, ಅ. 8: ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಖ್ಯಾತ ಕೇಶ ವಿನ್ಯಾಸಗಾರ ಜಾವೇದ್ ಹಬೀಬ್ ಹಾಗೂ ಅವರ ಕುಟುಂಬದ ವಿರುದ್ಧ ಉತ್ತರಪ್ರದೇಶದ ಸಂಭಲ್ ಪೊಲೀಸರು ಲುಕೌಟ್ ನೋಟಿಸು ಜಾರಿ ಮಾಡಿದ್ದಾರೆ.
ಜಾವೇದ್ ಹಬೀಬ್, ಅವರ ಪುತ್ರ ಹಾಗೂ ಇತರ ಮೂವರ ವಿರುದ್ಧ 20 ಎಫ್ಐಆರ್ಗಳು ದಾಖಲಾದ ಬಳಿಕ ಈ ನೋಟಿಸು ನೀಡಲಾಗಿದೆ.
‘‘ಈ ಪ್ರಕರಣ 5ರಿಂದ 7 ಕೋಟಿ ರೂ. ವಂಚನೆಯನ್ನು ಒಳಗೊಂಡಿರುವಂತೆ ಕಂಡು ಬರುತ್ತದೆ. ಸಂತ್ರಸ್ತರು ನಿರಂತರ ದೂರು ದಾಖಲಿಸಿದ್ದಾರೆ. ಅಲ್ಲದೆ, ವಂಚಿಸಿದ ಒಟ್ಟು ಮೊತ್ತ ಹೆಚ್ಚಾಗುವ ನಿರೀಕ್ಷೆ ಇದೆ. ತನಿಖೆ ಇದುವರೆಗೆ 1 ಕೋಟಿ ರೂ. ವರೆಗಿನ ವಂಚನೆಯನ್ನು ಬಹಿರಂಗಪಡಿಸಿದೆ’’ ಎಂದು ಸಂಭಲ್ ಪೊಲೀಸ್ ವರಿಷ್ಠ ಕೆ.ಕೆ. ಬಿಷ್ಣೋಯಿ ತಿಳಿಸಿದ್ದಾರೆ.
‘‘ಸಂಭಲ್ ನಲ್ಲಿ ಅಪರಾಧ ಹಾಗೂ ಅಪರಾಧಿಗಳನ್ನು ಮಟ್ಟ ಹಾಕಲು ಜಾವೇದ್ ಹಬೀಬ್, ಆತನ ಪುತ್ರ ಹಾಗೂ ಇತರ ಮೂವರ ವಿರುದ್ಧ ಒಟ್ಟು 20 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ವ್ಯಕ್ತಿಗಳು ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದರು ಹಾಗೂ ಜನರನ್ನು ವಂಚಿಸುತ್ತಿದ್ದರು. ಹೂಡಿಕೆಯ ಆಮಿಷ ಒಡ್ಡಿ ಜನರಿಂದ 5-7 ಕೋಟಿ ವರೆಗೆ ಹಣ ಪಡೆದುಕೊಂಡಿದ್ದಾರೆ. ಈ ವಿಷಯದ ಕುರಿತಂತೆ ಪ್ರಕರಣ ದಾಖಲಿಸಲಾಗಿದೆ. ಒಟ್ಟು 35 ಜನರು ದೂರು ದಾಖಲಿಸಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.
ತನ್ನ ಸೊತ್ತುಗಳು ಹಾಗೂ ಡಿಜಿಟಲ್ ವಹಿವಾಟಿನ ಹಿನ್ನೆಲೆಯಲ್ಲಿ ಪರಿಶೀಲನೆಗೆ ಒಳಪಟ್ಟಿರುವ ಕಂಪೆನಿ ಎಫ್ಎಲ್ಸಿಯ ಸ್ಥಾಪಕಿ ಹಬೀಬ್ ಅವರ ಪತ್ನಿ ಎಂಬುದನ್ನು ಪೊಲೀಸರ ತನಿಖೆ ಸೂಚಿಸಿದೆ. ಎಫ್ಎಲ್ಸಿ 2023ರಲ್ಲಿ ಸಂಭಲ್ನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿತ್ತು. ಈ ಸಂದರ್ಭ 100ಕ್ಕೂ ಅಧಿಕ ಜನರು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ ಮಂಗಳವಾರ ಜಾವೇದ್ ಹಬೀಬ್ ಅವರ ವಕೀಲ, ಜಾವೇದ್ ಹಬೀಬ್ ಅವರ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಬೀಬ್ ಹಾಗೂ ಅವರ ಪುತ್ರ ಕೂದಲು ಹಾಗೂ ಸೌಂದರ್ಯ ವ್ಯವಹಾರವನ್ನು ಉತ್ತೇಜಿಸಲು ಎಫ್ಎಲ್ಸಿ ಸಂಭಲ್ ನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಂಪೆನಿಯೊಂದಿರೆಗೆ ಅವರಿಗೆ ಯಾವುದೇ ಹಣಕಾಸು ಅಥವಾ ವ್ಯವಹಾರದ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.







