ಜೈಲಿನಲ್ಲಿದ್ದುಕೊಂಡೇ ಗೆಲುವು ಸಾಧಿಸಿದ ಜೆಡಿಯು ಅಭ್ಯರ್ಥಿ!

ಅನಂತ್ ಸಿಂಗ್ |Photo Credit : X
ಪಾಟ್ನಾ, ನ. 14: ಜನ ಸುರಾಜ್ ಪಕ್ಷ(ಜೆಎಸ್ಯು)ದ ಬೆಂಬಲಿಗನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಾರಾಗೃಹದಲ್ಲಿರುವ ಜನತಾ ದಳ(ಯು)ದ ನಾಯಕ ಅನಂತ್ ಸಿಂಗ್ ಮೊಕಾಮ ವಿಧಾನ ಸಭಾ ಕ್ಷೇತ್ರದಲ್ಲಿ 28,000ಕ್ಕೂ ಅಧಿಕ ಮತಗಳ ಅಂತರದಿಂದ ಅಭೂತಪೂರ್ವ ಜಯ ಗಳಿಸಿದ್ದಾರೆ.
ಅನಂತ್ ಸಿಂಗ್ ತನ್ನ ಸಮೀಪದ ಪ್ರತಿಸ್ಪರ್ಧಿ ರಾಷ್ಟ್ರೀಯ ಜನತಾ ದಳ (ಆರ್ಜೆಡಿ)ದ ವೀನಾ ದೇವಿ ಅವರನ್ನು 28,206 ಮತಗಳ ಅಂತರದಿಂದ ಸೋಲಿಸಿದ್ದಾರೆ. ಅನಂತ್ ಸಿಂಗ್ 91,416 ಮತಗಳನ್ನು ಪಡೆದುಕೊಂಡಂಡರೆ, ವೀಣಾ ದೇವಿ ಅವರು 63,210 ಮತಗಳನ್ನು ಪಡೆದುಕೊಂಡಿದ್ದಾರೆ
ಮೊಕಾಮಾ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ 5 ಬಾರಿ ಜಯ ಗಳಿಸಿರುವ ಅನಂತ್ ಸಿಂಗ್ 2005ರಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿ (ಯು) ಅಭ್ಯರ್ಥಿಯಾಗಿ ಮೊದಲ ಭಾರಿಗೆ ಸ್ಪರ್ಧಿಸಿದ್ದರು. ಅನಂತರ ಅವರು 2010ರಲ್ಲಿ ಕೂಡ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದರು. ಆದರೆ, ಐದು ವರ್ಷಗಳ ಬಳಿಕ ಜೆಡಿ (ಯು)ಗೆ ರಾಜೀನಾಮೆ ನೀಡಿದ್ದರು.
ಅದೇ ವರ್ಷ ಅವರು ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರು ಹಾಗೂ ಜೆಡಿ(ಯು) ಅಭ್ಯರ್ಥಿಯನ್ನು ಸೋಲಿಸಿದರು. 2020ರ ಚುನಾವಣೆಗೆ ಮುನ್ನ ಅವರು ಆರ್ಜೆಡಿಯೊಂದಿಗೆ ಸೇರಿದರು ಹಾಗೂ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಜಯ ಗಳಿಸಿದರು.
ಸಿಂಗ್ ಅವರ ವಿರುದ್ಧ 28 ಕ್ರಿಮಿನಲ್ ಪ್ರಕರಣಗಳಿದ್ದು, ಶಸ್ತ್ರಾಸ್ತ್ರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಬಳಿಕ 2022ರಲ್ಲಿ ಅವರು ತನ್ನ ಸ್ಥಾನವನ್ನು ಕಳೆದುಕೊಂದ್ದರು. ಆನಂತರ ಆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ನೀಲಮ್ ದೇವಿ ಸ್ಪರ್ಧಿಸಿ ಸ್ಥಾನವನ್ನು ಉಳಿಸಿಕೊಂಡಿದ್ದರು.
ರಾಜಕಾರಣಿಯಾಗಿ ಬದಲಾದ ಭೂಗತ ಪಾತಕಿ ದುಲಾರ್ ಸಿಂಗ್ ಯಾದವ್ ಅವರ ಹತ್ಯೆಗೆ ಸಂಬಂಧಿಸಿ ಅನಂತ್ ಸಿಂಗ್ ನವೆಂಬರ್ 2ರಂದು ಬಂಧಿತರಾಗಿದ್ದರು. ಪ್ರಶಾಂತ್ ಕಿಶೋರ್ ಅವರ ಜನ ಸೂರಜ್ ಪಕ್ಷದ ಟಿಕೆಟ್ನಲ್ಲಿ ಸ್ಪರ್ಧಿಸಿದ್ದ ಪ್ರಿಯದರ್ಶಿ ಪಿಯೂಷ್ ಪರ ಪ್ರಚಾರ ಮಾಡುತ್ತಿದ್ದಾಗ ಯಾದವ್ ಅವರನ್ನು ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು.







