ಬಿಹಾರ | ಪಕ್ಷವಿರೋಧಿ ಚಟುವಟಿಕೆ ಆರೋಪ: 11 ನಾಯಕರನ್ನು ಪಕ್ಷದಿಂದ ಉಚ್ಚಾಟಿಸಿದ ಜೆಡಿಯು

ನಿತೀಶ್ ಕುಮಾರ್ (Photo credit: PTI)
ಪಾಟ್ನಾ: ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ ಆರೋಪದ ಮೇಲೆ ಓರ್ವ ಮಾಜಿ ಸಚಿವ ಸೇರಿದಂತೆ 11 ಮಂದಿ ನಾಯಕರನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಉಚ್ಚಾಟಿಸಿದೆ. ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಹತ್ತಿರದಲ್ಲಿರುವಾಗಲೇ ಈ ಕ್ರಮ ಕೈಗೊಳ್ಳಲಾಗಿದೆ.
ಜೆಡಿಯುನಿಂದ ಉಚ್ಚಾಟಿತಗೊಂಡಿರುವ ನಾಯಕರ ಪೈಕಿ ಮಾಜಿ ಸಚಿವ ಶೈಲೇಶ್ ಕುಮಾರ್, ಮಾಜಿ ಶಾಸಕರಾದ ಶ್ಯಾಮ್ ಬಹದ್ದೂರ್ ಸಿಂಗ್ ಮತ್ತು ಸುದರ್ಶನ್ ಕುಮಾರ್ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಸಂಜಯ್ ಪ್ರಸಾದ್ ಮತ್ತು ರಣ್ ವಿಜಯ್ ಸಿಂಗ್ ಸೇರಿದ್ದಾರೆ.
ಪಕ್ಷದಿಂದ ಉಚ್ಚಾಟಿಸಲ್ಪಟ್ಟಿರುವ ಸದಸ್ಯರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಅಮಾನತುಗೊಳಿಸಲಾಗಿದೆ ಎಂದು ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದನ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
“ಪಕ್ಷದಿಂದ ಉಚ್ಚಾಟಿತಗೊಂಡಿರುವ ಎಲ್ಲ 11 ಮಂದಿ ನಾಯಕರು ರಾಜ್ಯದಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿರುವುದರಿಂದ, ಅವರೆಲ್ಲರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದ ಜೆಡಿಯು ಪಕ್ಷದ ಹಿರಿಯ ನಾಯಕರೊಬ್ಬರು, “ಪಕ್ಷದಿಂದ ಉಚ್ಚಾಟಿತಗೊಂಡಿರುವ ಈ ಎಲ್ಲ ನಾಯಕರು ಪಕ್ಷ ಹಾಗೂ ಎನ್ಡಿಎ ಮೈತ್ರಿಕೂಟದ ಅಧಿಕೃತ ಘೋಷಿತ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡುತ್ತಿದ್ದರು ಹಾಗೂ ಪಕ್ಷದ ಸೈದ್ಧಾಂತಿಕತೆಯನ್ನು ಧಿಕ್ಕರಿಸಿದ್ದರು” ಎಂದು ತಿಳಿಸಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಎರಡು ಹಂತದ ಮತದಾನ ನಡೆಯಲಿದ್ದು, ಮೊದಲ ಹಂತದ ಮತದಾನ ನವೆಂಬರ್ 6 ಹಾಗೂ ಎರಡನೆ ಹಂತದ ಮತದಾನ ನವೆಂಬರ್ 11ರಂದು ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.







