ಬಿಹಾರ ವಿಧಾನಸಭಾ ಚುನಾವಣೆ: ಸೀಟು ಹಂಚಿಕೆ ಜಟಾಪಟಿಯ ನಡುವೆ 44 ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಿದ ಜೆಡಿಯು

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Photo: PTI)
ಪಾಟ್ನಾ: ಬಿಹಾರದಲ್ಲಿನ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಕಗ್ಗಂಟಾಗಿ ಪರಿಣಮಿಸಿರುವಾಗಲೇ, ಮುಂಬರುವ ವಿಧಾನಸಭಾ ಚುನಾವಣೆಗಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಗುರುವಾರ ತನ್ನ 44 ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ.
ಇದಕ್ಕೂ ಮುನ್ನ, ಚಿರಾಗ್ ಪಾಸ್ವಾನ್ ಬೇಡಿಕೆ ಇಟ್ಟಿದ್ದ ನಾಲ್ಕು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 57 ವಿಧಾನಸಭಾ ಕ್ಷೇತ್ರಗಳಿಗೆ ಜೆಡಿಯು ತನ್ನ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ ಮಾಡಿತ್ತು. ಆ ಮೂಲಕ, ಆ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ದೃಢ ಬಯಕೆಯನ್ನು ವ್ಯಕ್ತಪಡಿಸಿದ್ದ ಜೆಡಿಯು, ಸೀಟು ಹಂಚಿಕೆ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಿತ್ತು.
2020ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸಚಿವ ಸುಮಿತ್ ಸಿಂಗ್ ಗೆ ಈ ಬಾರಿ ಚಕಾಯಿ ವಿಧಾನಸಭಾ ಕ್ಷೇತ್ರದಿಂದ ಜೆಡಿಯು ಟಿಕೆಟ್ ನೀಡಲಾಗಿದೆ.
ಸಚಿವ ಜಾಮಾ ಖಾನ್ ರನ್ನುಚೈನ್ ಪುರ್ ಕ್ಷೇತ್ರದಿಂದ, ಜಯಂತ್ ರಾಜ್ ರನ್ನು ಅಮರ್ ಪುರ್ ನಿಂದ ಹಾಗೂ ಲೆಸಿ ಸಿಂಗ್ ರನ್ನು ಧಮ್ದಾಹ ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲಾಗಿದೆ.
ವಶಿಷ್ಠ ಸಿಂಗ್ ಗೆ ಕರ್ಗಾಹರ್ ಕ್ಷೇತ್ರದ ಟಿಕೆಟ್ ನೀಡಲಾಗಿದ್ದರೆ, ಬುಲೊ ಮಂಡಲ್ ಗೆ ಗೋಪಾಲ್ ಪುರ್ ನಿಂದ ಟಿಕೆಟ್ ನೀಡಲಾಗಿದೆ.
ಈ ನಡುವೆ, ಗೋಪಾಲ್ ಮಂಡಲ್ ಗೆ ನೀಡಲಾಗಿದ್ದ ಟಿಕೆಟ್ ಅನ್ನು ರದ್ದುಗೊಳಿಸಲಾಗಿದೆ.







