ಪ್ರವಾಹ ಪರಿಹಾರ ನಿಧಿಗೆ ತೊಟ್ಟ ಒಡವೆಗಳನ್ನೇ ನೀಡಿದ ಮೇವಾತ್ ನ ಮಹಿಳೆಯರು!

Photo credit: tribuneindia.com
ಗುರುಗ್ರಾಮ(ಹರ್ಯಾಣ): ಪ್ರವಾಹದಿಂದಾಗಿ ಪಂಜಾಬಿನಲ್ಲಿ ಸಂಕಷ್ಟದಲ್ಲಿರುವ ಸಂತ್ರಸ್ತರ ನೆರವಿಗಾಗಿ ತೊಟ್ಟ ಒಡವೆಗಳನ್ನೇ ದೇಣಿಗೆಯಾಗಿ ನೀಡುವ ಮೂಲಕ ಮೇವಾತ್ ಪ್ರದೇಶದ ಮಹಿಳೆಯರು ದಾನಶೀಲತೆಯನ್ನು ಮರುವ್ಯಾಖ್ಯಾನಿಸಿದ್ದಾರೆ ಎಂದು tribuneindia.com ವರದಿ ಮಾಡಿದೆ.
ನುಹ್ನ ತಿಲಕಪುರಿ ನಿವಾಸಿ ರಹಿಮಿ(75) ತನ್ನ ಬೆಳ್ಳಿಯ ಬಳೆಯನ್ನು ಯಾವುದಾದರೂ ಬಡ ಹುಡುಗಿಯ ಮದುವೆಗೆ ಉಡುಗೊರೆಯಾಗಿ ನೀಡಲು ಉಳಿಸಿಕೊಂಡಿದ್ದರು. ಬದಲಿಗೆ ಅವರು ಅದನ್ನು ಕೈಯಿಂದ ತೆಗೆದು ಪಂಜಾಬ್ ಪ್ರವಾಹ ಪರಿಹಾರ ನಿಧಿಯನ್ನು ಸಂಗ್ರಹಿಸುತ್ತಿರುವ ಸ್ವಯಂಸೇವಕರಿಗೆ ನೀಡಿದ್ದಾರೆ.
‘ನಾನು ಸಾಯುವ ಮೊದಲು ಅದನ್ನು ಯಾರಾದರೂ ಬಡ ಹುಡುಗಿಯ ಮದುವೆಗೆ ಉಡುಗೊರೆಯಾಗಿ ನೀಡಲು ಬಯಸಿದ್ದೆ,ಆದರೆ ಪಂಜಾಬಿನಲ್ಲಿಯ ನಮ್ಮ ಸ್ವಂತ ಜನರಿಗೆ ಅದರ ಅಗತ್ಯ ಹೆಚ್ಚು ಎಂದು ನಾನು ಭಾವಿಸಿದ್ದೇನೆ. ಅದು ಹೆಚ್ಚಿನದೇನಲ್ಲ,ಆದರೆ ನನ್ನ ಬಳಿಯಿರುವುದು ಅಷ್ಟೇ. ನಾವು 1996ರಲ್ಲಿ ಪ್ರವಾಹಗಳನ್ನು ಎದುರಿಸಿದ್ದೇವೆ ಮತ್ತು ಅದರ ಪರಿಣಾಮಗಳೇನು ಎನ್ನುವುದು ನಮಗೆ ಗೊತ್ತಿದೆ. ಭೂಮಾಲಿಕರು ಬಡವರಾಗಿಬಿಟ್ಟಿದ್ದರು ಮತ್ತು ಮಕ್ಕಳಿಗೆ ಆಹಾರಕ್ಕಾಗಿ ಪರದಾಡುತ್ತಿದ್ದರು ’ಎಂದು ರಹಿಮಿ ನೆನಪಿಸಿಕೊಂಡರು.
ರಹಿಮಿ ಮಾತ್ರವಲ್ಲ, ಗುರುಗ್ರಾಮ, ಫರೀದಾಬಾದ್ ಮತ್ತು ನುಹ್ಗಳನ್ನು ಒಳಗೊಂಡಿರುವ ಮೇವಾತ್ನಾದ್ಯಂತ ಹಿರಿಯ ಮಿಯೊ ಮಹಿಳೆಯರು ಸದ್ದಿಲ್ಲದೆ ಅನುಕಂಪ ಮತ್ತು ತ್ಯಾಗಕ್ಕೆ ನಿದರ್ಶನವಾಗಿದ್ದಾರೆ. ಸೊಹ್ನಾ ಬ್ಲಾಕ್ನ ನುನೇಹ್ರಾ ಗ್ರಾಮದಲ್ಲಿ ವೃದ್ಧ ಮಹಿಳೆಯರು ಪಂಜಾಬ್ ಪರಿಹಾರಕ್ಕಾಗಿ ಸುಮಾರು ಎರಡು ಕೆ.ಜಿ.ಬೆಳ್ಳಿ ಮತ್ತು 20 ಗ್ರಾಂ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದಾರೆ.
‘ಇದು ನಮ್ಮ ಸಂಪ್ರದಾಯ’ ಎಂದು ಹೇಳಿದ ನುನೇಹ್ರಾ ನಿವಾಸಿ ಆಸ್ಮಿನಾ, ‘ಹೆಣ್ಣುಮಕ್ಕಳು ಮತ್ತು ಸೊಸೆಯಂದಿರಿಗೆ ಆಭರಣಗಳನ್ನು ಹಸ್ತಾಂತರಿಸುವ ಜೊತೆಗೆ ಮಹಿಳೆಯರು ತಮ್ಮ ವೃದ್ಧಾಪ್ಯದಲ್ಲಿ ಅವುಗಳನ್ನು ದಾನವಾಗಿಯೂ ನೀಡುತ್ತಾರೆ. ಸ್ವತಃ ಪ್ರವಾಹಗಳನ್ನು ಎದುರಿಸಿರುವ ನಾವು ಇದಕ್ಕಿಂತ ಉದಾತ್ತವಾದುದು ಯಾವುದೂ ಇಲ್ಲ ಎಂದು ಭಾವಿಸಿದ್ದೇವೆ. ಕೆಲವು ಯುವತಿಯರು ತಮ್ಮ ಮೆಹರ್ ಹಣವನ್ನೂ ದೇಣಿಗೆಯಾಗಿ ನೀಡಿದ್ದಾರೆ. ಇತರರು ಪಾತ್ರೆಗಳು ಮತ್ತು ಆಹಾರವನ್ನು ನೀಡುತ್ತಿದ್ದಾರೆ’ ಎಂದರು.
ಮೇವಾತ್ ಉತ್ತರ ಭಾರತದ ಅತ್ಯಂತ ಹಿಂದುಳಿದ ಮತ್ತು ಬಡ ಜಿಲ್ಲೆಗಳಲ್ಲಿ ಒಂದಾಗಿದೆ. ಮಳೆಯಿಂದಾಗಿ ನೀರು ತುಂಬಿಕೊಂಡು ಅದೂ ತತ್ತರಿಸುತ್ತಿದೆ, ಆದರೆ ಪಂಜಾಬ್ ಸಂಕಷ್ಟದಲ್ಲಿರುವಾಗ ಮೇವಾತ್ನ ಜನರು ತಮ್ಮ ಕೈಲಾದಷ್ಟು ಮಾಡುತ್ತಿದ್ದಾರೆ. ಈವರೆಗೆ 250ಕ್ಕೂ ಹೆಚ್ಚು ಟ್ರಕ್ಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗಿದ್ದು,ಇದರಲ್ಲಿ ಮಹಿಳೆಯರ ಕೊಡುಗೆ ಎದ್ದು ಕಾಣುತ್ತಿದೆ.
ಎಲ್ಲ ದೇಣಿಗೆಗಳೂ ಒಡವೆಗಳಲ್ಲ,ಕೆಲವು ಮಹಿಳೆಯರು ತಮ್ಮ ವೃದ್ಧಾಪ್ಯ ಪಿಂಚಣಿಗಳನ್ನು ನೀಡುತ್ತಿದ್ದಾರೆ,ಇತರರು ತಮಗೇನು ಸಾಧ್ಯವೋ ಅದನ್ನು ನೀಡುತ್ತಿದ್ದಾರೆ.
‘ನೀರು ಇಳಿದ ಬಳಿಕ ನಿಮ್ಮ ಮಗು ಚಳಿಯಿಂದ ನಡುಗುತ್ತಿರುವಾಗ ಅದಕ್ಕೆ ಹಣವನ್ನು ಹೊದಿಸಲಾಗುವುದಿಲ್ಲ,ಬಿಸ್ಕಿಟ್ಗಳು ಹಸಿವನ್ನು ತಣಿಸುವುದಿಲ್ಲ. ನನ್ನ ಬಳಿ ಹಣ ಅಥವಾ ಒಡವೆಗಳಿಲ್ಲ,ಆದರೆ ನಾನು ನನ್ನ ಪ್ರದೇಶದಲ್ಲಿ ಅತ್ಯುತ್ತಮವಾದ ‘ಗುದಡಿ(ಕೌದಿ)’ಗಳನ್ನು ತಯಾರಿಸುತ್ತೇನೆ. ನಾನು ನಾಲ್ಕು ಗುದಡಿಗಳನ್ನು ಮಾಡಿ ಅವರಿಗೆ ಕಳುಹಿಸಿದ್ದೇನೆ ’ ಎಂದು ತಿಲಕಪುರಿಯ ಮೆಹೆರಾಂ(72) ಹೆಮ್ಮೆಯಿಂದ ಹೇಳಿದರು.
ಮಹಿಳೆಯರು ಸಂತ್ರಸ್ತರಿಗಾಗಿ ಒಂದು ವಾರವಾದರೂ ಕೆಡದ ರೊಟ್ಟಿಗಳನ್ನು ತಯಾರಿಸುತ್ತಿದ್ದಾರೆ. ಕಳೆದ ಐದಾರು ದಿನಗಳಿಂದ ಮಸೀದಿಗಳು ನೆರವು ಅಭಿಯಾನಗಳನ್ನು ಪ್ರಕಟಿಸುತ್ತಿವೆ,ಗ್ರಾಮದ ಮಕ್ಕಳು ಮತ್ತು ವೃದ್ಧರು ಸೇರಿದಂತೆ ಎಲ್ಲರೂ ತಮ್ಮ ಕೈಲಾದಷ್ಟು ದೇಣಿಗೆಗಳನ್ನು ನೀಡುತ್ತಿದ್ದಾರೆ.







