ಜಾರ್ಖಂಡ್: ಶೌಚ ಗುಂಡಿಗೆ ಇಳಿದ ನಾಲ್ವರು ಉಸಿರುಗಟ್ಟಿ ಸಾವು

ಸಾಂದರ್ಭಿಕ ಚಿತ್ರ
ರಾಂಚಿ, ಆ. 15: ನೂತನವಾಗಿ ನಿರ್ಮಾಣ ಮಾಡಲಾದ ಶೌಚ ಗುಂಡಿಗೆ ಇಳಿದ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಗರವಾ ಜಿಲ್ಲಾ ಕೇಂದ್ರದ ಸಮೀಪದ ನವಾಡಾ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಮೋತಿ ಚೌಧರಿ ಅವರ ಮೂವರು ಪುತ್ರರಾದ ಅಜಯ್ ಚೌಧರಿ (50), ಚಂದ್ರಶೇಖರ್ ಚೌಧರಿ (42), ರಾಜು ಶೇಖರ್ ಚೌಧರಿ (55) ಹಾಗೂ ಮಾಲ್ತು ರಾಮ್ ಎಂದು ಗುರುತಿಸಲಾಗಿದೆ. ಎಲ್ಲರೂ ನವಾಡಾ ಗ್ರಾಮದವರು.
ರಾಜು ಶೇಖರ್ ಚೌಧರಿ ಅವರ ಮನೆ ನಿರ್ಮಾಣ ಹಂತದಲ್ಲಿತ್ತು. ಅಲ್ಲದೆ ಹೊಸ ಶೌಚ ಗುಂಡಿ ನಿರ್ಮಾಣ ಮಾಡಲಾಗುತ್ತಿತ್ತು. ಕಾರ್ಮಿಕ ಶೌಚ ಗುಂಡಿಯ ತ್ಯಾಜ್ಯ ನೆಲೆಗೊಳ್ಳುವ ಚೇಂಬರ್ ಅನ್ನು ತೆರೆಯುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಾಲ್ತು ರಾಮ್ ಮೊದಲು ಶೌಚ ಗುಂಡಿಗೆ ಇಳಿದರು. ಅವರು ದೀರ್ಘ ಸಮಯದ ವರೆಗೆ ಹೊರಗೆ ಬರಲಿಲ್ಲ. ಇದರಿಂದ ಆತಂಕಿತರಾದ ರಾಜು ಶೇಖರ್ ಚೌಧರಿ ಶೌಚ ಗುಂಡಿಗೆ ಇಳಿದರು. ಅವರು ಕೂಡ ಹಿಂದಿರುಗಿ ಬರಲಿಲ್ಲ. ಅನಂತರ ಅಜಯ್ ಚೌಧರಿ ಹಾಗೂ ಚಂದ್ರ ಶೇಖರ್ ಚೌಧರಿ ಒಬ್ಬರ ನಂತರ ಒಬ್ಬರು ಇಳಿದರು. ಆದರೆ, ಎಲ್ಲರೂ ಅದರ ಒಳಗೆ ಸಿಲುಕಿಕೊಂಡರು.
ಶೌಚ ಗುಂಡಿಯಿಂದ ಯಾರೊಬ್ಬರೂ ಹೊರಗೆ ಬರದೇ ಇದ್ದಾಗ ಏನೋ ಪ್ರಮಾದ ಸಂಭವಿಸಿದೆ ಎಂದು ಗ್ರಾಮಸ್ಥರು ಅರಿತುಕೊಂಡರು. ಅನಂತರ ಶ್ರಮವಹಿಸಿ ನಾಲ್ವರನ್ನೂ ಶೌಚ ಗುಂಡಿಯಿಂದ ಹೊರಗೆ ತಂದರು. ಕೂಡಲೇ ಅವರನ್ನು ಗರವಾ ಸದಾರ್ ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ವೈದ್ಯರು ನಾಲ್ವರೂ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಈ ಸುದ್ದಿ ತಿಳಿದ ಉಪ ವಿಭಾಗೀಯ ಅಧಿಕಾರಿ (ಎಸ್ಡಿಒ) ಸಂಜಯ್ ಕುಮಾರ್, ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಪಿಒ) ನೀರಜ್ ಕುಮಾರ್ ಹಾಗೂ ಗರವಾ ಪೊಲೀಸ್ ಠಾಣೆಯ ಉಸ್ತುವಾರಿ ಬ್ರಿಜ್ ಕುಮಾರ್ ಪೊಲೀಸ್ ತನಿಖೆ ನಡೆಸಲು ತಂಡದೊಂದಿಗೆ ಆಸ್ಪತ್ರೆಗೆ ಆಗಮಿಸಿದರು.
ಶೌಚ ಗುಂಡಿಯ ಒಳಗಿಂದ ಹೊರ ಸೂಸಿದ ವಿಷಾನಿಲದಿಂದ ಇವರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.







