ಜಾರ್ಖಂಡ್ | ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿ ಮೇಜಿನಿಂದ ಬಿದ್ದು ಗರ್ಭಿಣಿ ಮೃತ್ಯು

ಸಾಂದರ್ಭಿಕ ಚಿತ್ರ | Photo Credit : freepik.com
ರಾಂಚಿ, ನ. 3: ಗರ್ಭಿಣಿಯೋರ್ವರು ಶಸ್ತ್ರಚಿಕಿತ್ಸೆ ಮೇಜಿನಿಂದ ಕೆಳಗೆ ಬಿದ್ದ ಬಳಿಕ ಸಾವನ್ನಪ್ಪಿದ ಆಘಾತಕಾರಿ ಘಟನೆ ಹಝಾರಿಬಾಗ್ ನ ಶೇಖ್ ಬಿಖಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದಿದೆ.
ಮಹಿಳೆಯ ಸಾವಿಗೆ ಆಸ್ಪತ್ರೆಯೇ ಕಾರಣ ಎಂದು ಕುಟುಂಬಿಕರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಆಸ್ಪತ್ರೆಯ ಆಡಳಿತ ಮಂಡಳಿ ನಿರಾಕರಿಸಿದೆ. ಮಹಿಳೆಯ ಸಾವಿಗೆ ಕುಟುಂಬವೇ ಕಾರಣ ಎಂದು ಅದು ಹೇಳಿದೆ.
ಚಾಂದನಿ ಕುಮಾರಿ ಎಂಬವರಿಗೆ ಸೋಮವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅವರನ್ನು ಶೇಖ್ ಬಿಖಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರನ್ನು ಶಶ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ಯಲಾಗಿತ್ತು. ಅವರು ಅಲ್ಲಿನ ಮೇಜಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದರು. ಅನಂತರ ಶಸ್ತ್ರ ಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸಲಾಗಿತ್ತು. ಬಳಿಕ ಕುಟುಂಬದ ಸದಸ್ಯರು ಅವರನ್ನು ಬಲವಂತವಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು.
ಮಹಿಳೆ ಮೃತಪಟ್ಟ ಬಳಿಕ ಕುಟುಂಬದ ಸದಸ್ಯರು ಶೇಖ್ ಬಿಖಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಹಿಂದಿರುಗಿ ಗದ್ದಲ ಉಂಟು ಮಾಡಿದ್ದಾರೆ ಹಾಗೂ ಆಸ್ಪತ್ರೆಯ ಆವರಣದಲ್ಲಿ ದಾಂಧಲೆ ನಡೆಸಿದ್ದಾರೆ.
ಮಹಿಳೆಯ ಸಾವಿಗೆ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ ಕಾರಣ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಘಟನೆ ನಡೆದ ಸಂದರ್ಭ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಯಾವೊಬ್ಬ ವೈದ್ಯರು ಇರಲಿಲ್ಲ. ದಾದಿಯರೇ ಹೆರಿಗೆ ಮಾಡಿಸಿದರು ಎಂದು ಅವರು ಹೇಳಿದ್ದಾರೆ.
‘‘ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ವೈದ್ಯರು ಇರುತ್ತಿದ್ದರೆ, ಚಾಂದನಿ ಹಾಗೂ ಅವರ ನವಜಾತು ಶಿಶು ಸಾವನ್ನಪ್ಪುತ್ತಿರಲಿಲ್ಲ’’ ಎಂದು ಕುಟುಂಬದ ಓರ್ವ ಸದಸ್ಯರು ಹೇಳಿದ್ದಾರೆ.







