Jharkhand | ಜಾನುವಾರು ಸಾಗಣೆದಾರನ ಮೇಲೆ ಗುಂಪಿನಿಂದ ಥಳಿಸಿ ಹತ್ಯೆ

ಸಾಂದರ್ಭಿಕ ಚಿತ್ರ
ಗೊಡ್ಡ (ಜಾರ್ಖಂಡ್): ಜಾರ್ಖಂಡ್ ರಾಜ್ಯದ ಗೊಡ್ಡ ಜಿಲ್ಲೆಯಲ್ಲಿ 45 ವರ್ಷದ ಮುಸ್ಲಿಂ ಜಾನುವಾರು ಸಾಗಣೆದಾರನೊಬ್ಬರನ್ನು ಗುಂಪೊಂದು ಥಳಿಸಿ ಹತ್ಯೆಗೈದಿರುವ ಘಟನೆ ಬುಧವಾರ ಬಿಹಾರ–ಜಾರ್ಖಂಡ್ ಗಡಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ರಾಣಿಪುರ್ ಗ್ರಾಮದ ನಿವಾಸಿ ಪಪ್ಪು ಅನ್ಸಾರಿ ಎಂಬವರು ಬಿಹಾರದ ಬಂಕಾದಲ್ಲಿರುವ ಜಾನುವಾರು ಮಾರುಕಟ್ಟೆಯಿಂದ ಸ್ವಗ್ರಾಮಕ್ಕೆ ಮರಳುವ ವೇಳೆ, ಬುಧವಾರ ರಾತ್ರಿ ಗೊಡ್ಡ ಜಿಲ್ಲೆಯ ಸುಗಬಥನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಧರ್ಮದ ಕಾರಣಕ್ಕೆ ಅನ್ಸಾರಿಯವರನ್ನು ಹತ್ಯೆಗೈಯ್ಯಲಾಗಿದೆ ಎಂದು ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಮೃತ ಪಪ್ಪು ಅನ್ಸಾರಿಯವರ ಪತ್ನಿ ಆಯೇಶಾ ಬೇಗಂ ನೀಡಿದ ದೂರಿನ ಆಧಾರದಲ್ಲಿ ಗುರುವಾರ ಎಫ್ಐಆರ್ ದಾಖಲಿಸಲಾಗಿದೆ. ಅಪರಿಚಿತ ವ್ಯಕ್ತಿಗಳು ಪಪ್ಪು ಅನ್ಸಾರಿ ಅವರ ವಾಹನವನ್ನು ತಡೆದು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದುಷ್ಕರ್ಮಿಗಳ ಗುಂಪು ಮೊದಲು ಪಪ್ಪು ಅನ್ಸಾರಿಯವರ ಹೆಸರನ್ನು ಕೇಳಿದ್ದು, ಬಳಿಕ ಕೊಡಲಿ, ಕುಡಗೋಲು ಹಾಗೂ ಬಾಣಗಳು ಸೇರಿದಂತೆ ಹರಿತ ಆಯುಧಗಳಿಂದ ಅವರ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಪಪ್ಪು ಅನ್ಸಾರಿ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಮೃತದೇಹವನ್ನು ಸಮೀಪದ ಹೊಲವೊಂದರಲ್ಲಿ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಆರಂಭದಲ್ಲಿ ವಾಹನದೊಳಗಿದ್ದವರ ಕುರಿತು ಪ್ರಶ್ನಿಸುವ ಸೋಗಿನಲ್ಲಿ ದುಷ್ಕರ್ಮಿಗಳ ಗುಂಪು ವಾಹನವನ್ನು ತಡೆದಿದೆ. ಆದರೆ ವಾಹನವನ್ನು ಮುಂದುವರಿಸಿ ಚಲಾಯಿಸುವಂತೆ ಪಪ್ಪು ಅನ್ಸಾರಿ ಚಾಲಕ ಹಾಗೂ ವಾಹನದೊಳಗಿದ್ದವರಿಗೆ ಸೂಚಿಸಿದ್ದರಿಂದ ದುಷ್ಕರ್ಮಿಗಳ ಗುಂಪು ಕೋಪಗೊಂಡಿದೆ ಎನ್ನಲಾಗಿದೆ. ವಾಹನದಲ್ಲಿದ್ದ ಇತರರು ದುಷ್ಕರ್ಮಿಗಳ ಹಿಡಿತದಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾದರೂ, ಪಪ್ಪು ಅನ್ಸಾರಿ ಮಾತ್ರ ಸಿಕ್ಕಿಬಿದ್ದಿದ್ದು, ಅವರ ಮೇಲೆ ದುಷ್ಕರ್ಮಿಗಳ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ ಎನ್ನಲಾಗಿದೆ.
ಪಪ್ಪು ಅನ್ಸಾರಿಯ ಹೆಸರನ್ನು ಕೇಳಿದ ಬಳಿಕ ಅವರು ಮುಸ್ಲಿಂ ಎಂಬುದು ದುಷ್ಕರ್ಮಿಗಳ ಗುಂಪಿಗೆ ತಿಳಿದಿದ್ದು, ಆನಂತರ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪಪ್ಪು ಅನ್ಸಾರಿಯ ಭಾಮೈದುನ ತಿಳಿಸಿದ್ದಾರೆ. ಪಪ್ಪು ಅನ್ಸಾರಿ ಕಾನೂನುಬದ್ಧವಾಗಿ ಜಾನುವಾರು ಸಾಗಾಟ ನಡೆಸುತ್ತಿದ್ದರು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಗೊಡ್ಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಕೇಶ್ ಕುಮಾರ್ ತಿಳಿಸಿದ್ದಾರೆ.







