ಜಾರ್ಖಂಡ್| ಭದ್ರತಾ ಪಡೆಗಳಿಂದ 15 ಮಾವೋವಾದಿಗಳ ಹತ್ಯೆ

ಸಾಂದರ್ಭಿಕ ಚಿತ್ರ | Photo Credit ; PTI
ಚಾಯಿಬಾಸಾ,ಜ.22: ಜಾರ್ಖಂಡ್ನ ಪಶ್ಚಿಮ ಸಿಂಗಭೂಮ್ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳೊಂದಿಗೆ ಗುಂಡಿನ ಕಾಳಗದಲ್ಲಿ 15 ಮಾವೋವಾದಿಗಳು ಮೃತಪಟ್ಟಿದ್ದಾರೆ. ಮೃತರಲ್ಲಿ ತಲೆಯ ಮೇಲೆ ಒಂದು ಕೋಟಿ ರೂ.ಗಳ ಬಹುಮಾನವನ್ನು ಹೊತ್ತಿದ್ದ ಪ್ರಮುಖ ನಾಯಕ ಅನಲ್ ದಾ ಸೇರಿದ್ದಾನೆ ಎಂದು ಪೋಲಿಸರು ತಿಳಿಸಿದರು.
ಸರಂಡ ಅರಣ್ಯದ ಕುಮ್ಡಿಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಸಿಆರ್ಪಿಎಫ್ನ ಕೋಬ್ರಾ ಪಡೆಯ ಸುಮಾರು 1,500 ಸಿಬ್ಬಂದಿಗಳು ಭಾಗಿಯಾಗಿದ್ದಾರೆ ಎಂದರು.
ಪ್ರಮುಖ ನಾಯಕ ಪತಿರಾಮ ಮಝ್ಹಿ ಅಲಿಯಾಸ್ ಅನಲ್ ದಾ ಸೇರಿದಂತೆ 15 ಮಾವೋವಾದಿಗಳ ಮೃತದೇಹಗಳು ಪತ್ತೆಯಾಗಿವೆ. ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಬೆಳಿಗ್ಗೆ ಆರು ಗಂಟೆಗೆ ಆರಂಭವಾಗಿದ್ದ ಗುಂಡಿನ ಕಾಳಗ ಈಗಲೂ ಮುಂದುವರಿದಿದೆ ಎಂದು ಜಿಲ್ಲಾ ಕೇಂದ್ರವಾದ ಚಾಯಿಬಾಸಾದಲ್ಲಿಯ ಪೋಲಿಸ್ ಮುಖ್ಯಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.
ಸರಂಡ ಅರಣ್ಯದಲ್ಲಿ ಮಾವೋವಾದಿ ನಿಗ್ರಹ ಕಾರ್ಯಾಚರಣೆಯನ್ನು ಮಂಗಳವಾರದಿಂದಲೇ ಪ್ರಾರಂಭಿಸಲಾಗಿತ್ತು. ಆದರೆ ಗುಂಡಿನ ಕಾಳಗ ಗುರುವಾರ ಬೆಳಿಗ್ಗೆ ಆರಂಭಗೊಂಡಿದೆ ಎಂದೂ ಅದು ತಿಳಿಸಿದೆ.
ಸರಂಡ ಅರಣ್ಯದಲ್ಲಿ ತನ್ನ ತಂಡದೊಂದಿಗೆ ಅನಲ್ ದಾ ಉಪಸ್ಥಿತಿಯ ಬಗ್ಗೆ ಪೋಲಿಸರು ಮಾಹಿತಿ ಸ್ವೀಕರಿಸಿದ ಬಳಿಕ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು ಎಂದು ಐಜಿಪಿ ಮೈಕೇಲ್ ರಾಜ್ ಎಸ್.ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಗಿರಿಧಿ ಜಿಲ್ಲೆಯ ಪಿರ್ತಾಂಡ್ ನಿವಾಸಿ ಅನಲ್ ದಾ 1987ರಿಂದ ಮಾವೋವಾದಿ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದು, ಪೋಲಿಸರು ವರ್ಷಗಳಿಂದಲೂ ಆತನ ಹುಡುಕಾಟದಲ್ಲಿದ್ದರು.
ಕೊಲ್ಹಾನ್ ಮತ್ತು ಸರಂಡಾ ಮಾವೋವಾದಿಗಳ ಕೊನೆಯ ಭದ್ರಕೋಟೆಗಳೆಂದು ಪರಿಗಣಿಸಲಾಗಿದೆ. ಭದ್ರತಾ ಪಡೆಗಳು ಬುಡಾ ಪಹಾಡ್, ಛಾತ್ರಾ,ಲಾತೇಹಾರ್, ಗುಮ್ಲಾ, ಲೋಹಾರ್ದಾಗಾ, ಪರಸನಾಥ್ ಮತ್ತು ರಾಂಚಿಗಳಲ್ಲಿ ಮಾವೋವಾದಿಗಳ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಿವೆ ಎಂದು ಅಧಿಕಾರಿಗಳು ತಿಳಿಸಿದರು.
2001 ಮತ್ತು 2025ರ ನಡುವೆ ಜಾರ್ಖಂಡ್ನಾದ್ಯಂತ 11,000ಕ್ಕೂ ಅಧಿಕ ಮಾವೋವಾದಿಗಳನ್ನು ಬಂಧಿಸಲಾಗಿದೆ. ಸುಮಾರು 250 ಮಾವೋವಾದಿಗಳು ಕೊಲ್ಲಲ್ಪಟ್ಟಿದ್ದು,350ಕ್ಕೂ ಅಧಿಕ ಬಂಡುಕೋರರು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ.







