ಈಡಿಯಿಂದ ಝಾರ್ಖಂಡ್ ಮುಖ್ಯಮಂತ್ರಿ ವಿಚಾರಣೆ
8ನೇ ಸಮನ್ಸ್ ಗೆ ಹಾಜರಾದ ಹೇಮಂತ್ ಸೊರೇನ್
ಹೇಮಂತ್ ಸೊರೇನ್ | Photo: PTI
ರಾಂಚಿ : ಭೂ ವ್ಯವಹಾರದಲ್ಲಿ ನಡೆದಿದೆಯೆನ್ನಲಾದ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ, ಅನುಷ್ಠಾನ ನಿರ್ದೇಶನಾಲಯ (ಈಡಿ)ದ ಅಧಿಕಾರಿಗಳು ಶನಿವಾರ ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ರನ್ನು ರಾಂಚಿಯಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಪ್ರಶ್ನಿಸಿದ್ದಾರೆ.
ಇದಕ್ಕೂ ಮುನ್ನ, ಆಡಳಿತಾರೂಢ ಝಾರ್ಖಂಡ್ ಮುಕ್ತಿ ಮೋರ್ಚ (ಜೆಎಮ್ಎಮ್)ದ ಕಾರ್ಯಕಾರಿ ಅಧ್ಯಕ್ಷರೂ ಆಗಿರುವ 48 ವರ್ಷದ ಸೊರೇನ್ ನಿರ್ದೇಶನಾಲಯದ ಏಳು ಸಮನ್ಸ್ ಗಳನ್ನು ನಿರ್ಲಕ್ಷಿಸಿದ್ದರು. ಕೇಂದ್ರೀಯ ತನಿಖಾ ಸಂಸ್ಥೆಯು ಎಂಟನೇ ಬಾರಿಗೆ ಸಮನ್ಸ್ ನೀಡಿದಾಗ ವಿಚಾರಣೆ ಎದುರಿಸಲು ಅವರು ಒಪ್ಪಿಕೊಂಡಿದ್ದಾರೆ. ನಿರ್ದೇಶನಾಲಯದ ಅಧಿಕಾರಿಗಳು ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಸೊರೇನ್ ರ ನಿವಾಸವನ್ನು ತಲುಪಿದರು.
ಅನುಷ್ಠಾನ ನಿರ್ದೇಶನಾಲಯದ ಅಧಿಕಾರಿಗಳ ಭದ್ರತೆಯ ಹೊಣೆ ಹೊತ್ತಿರುವ ಸಿಐಎಸ್ಎಫ್ ಸಿಬ್ಬಂದಿಯು ಸೊರೇನ್ ನಿವಾಸದ ಸುತ್ತಲಿನ ಚಟುವಟಿಕೆಗಳ ಮೇಲೆ ನಿಗಾ ಇಡಲು ಶಕ್ತಿಶಾಲಿ ಬಾಡಿ ಕ್ಯಾಮರಗಳನ್ನು ಬಳಸಿದ್ದಾರೆ. ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಸಿಆರ್ಪಿಎಫ್ ಸಿಬ್ಬಂದಿಯನ್ನು ನೇಮಿಸಲಾಗಿದೆ.
ವಿಚಾರಣೆಯ ನಡುವೆಯೇ ಜೆಎಮ್ಎಮ್ ಸಭೆ
ಈ ನಡುವೆ, ಜೆಎಮ್ಎಮ್ ಸೊರೇನ್ ನಿವಾಸದಲ್ಲಿ ಪಕ್ಷದ ಶಾಸಕರ ಸಭೆಯನ್ನು ಆಯೋಜಿಸಿದೆ.
‘‘ಅನುಷ್ಠಾನ ನಿರ್ದೇಶನಾಲಯವು ಮುಖ್ಯಮಂತ್ರಿಯನ್ನು ಪ್ರಶ್ನಿಸುತ್ತಿದೆ. ನಾವು ಕೂಡ ನಮ್ಮ ಸಭೆ ನಡೆಸುತ್ತಿದ್ದೇವೆ. ವಿಚಾರಣೆಯ ಫಲಿತಾಂಶದ ಆಧಾರದ ಮೇಲೆ ನಮ್ಮ ಭವಿಷ್ಯದ ಕಾರ್ಯಯೋಜನೆಯನ್ನು ರೂಪಿಸಲಾಗುವುದು’’ ಎಂದು ಜೆಎಮ್ಎಮ್ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರ ಸುಪ್ರಿಯೊ ಭಟ್ಟಾಚಾರ್ಯ ಪಿಟಿಐಯೊಂದಿಗೆ ಮಾತನಾಡುತ್ತಾ ಹೇಳಿದರು.