ಜಾರ್ಖಂಡ್: ಎನ್ಕೌಂಟರ್ನಲ್ಲಿ ಮಾವೋವಾದಿ ಕಾರ್ಯಕರ್ತನ ಹತ್ಯೆ

ಸಾಂದರ್ಭಿಕ ಚಿತ್ರ (PTI)
ರಾಂಚಿ,ಸೆ.14: ಜಾರ್ಖಂಡ್ ಪೊಲೀಸರು ರವಿವಾರ ನಡೆಸಿದ ಎನ್ಕೌಂಟರ್ನಲ್ಲಿ ನಿಷೇಧಿತ ಮಾವೋವಾದಿ ಸಂಘಟನೆಯೊಂದರ ಕಾರ್ಯಕರ್ತ ಮುಖ್ದೇವೊ ಯಾದವ್ ನನ್ನು ಹತ್ಯೆಗೈದಿದ್ದಾರೆ.
ಪಲಾಮು ಜಿಲ್ಲೆಯ ಮಾನಾಟು ಅರಣ್ಯ ಪ್ರದೇಶದಲ್ಲಿ ಭದ್ರತಾಪಡೆಗಳು ಹಾಗೂ ನಿಷೇಧಿತ ಮಾವೋವಾದಿ ಸಂಘಟನೆ ತೃತೀಯ ಸಮ್ಮೇಳನ್ ಪ್ರಸ್ತುತಿ ಸಮಿತಿ (ಟಿಎಸ್ಪಿಸಿ) ನಡುವೆ ಹಲವಾರು ತಾಸುಗಳವರೆಗೆ ಎನ್ಕೌಂಟರ್ ಕಾಳಗ ನಡೆದಿದ್ದಾಗಿ ಅವರು ಹೇಳಿದ್ದಾರೆ.
ಎನ್ಕೌಂಟರ್ನಲ್ಲಿ ಹತ್ಯೆಯಾದ ಮುಖದೇವ್ ಯಾದವ್ನ ಟಿಎಸ್ಪಿಸಿಯ ಪ್ರಮುಖ ಕಾರ್ಯಕರ್ತನಾಗಿದ್ದು, ಆತನ ತಲೆಗೆ ಸರಕಾರ 5 ಲಕ್ಷ ರೂ. ಘೋಷಿಸಿತ್ತು.
ಕಾಳಗ ನಡೆದ ಸ್ಥಳದಲ್ಲಿ ಆತನ ಮೃತದೇಹ ಹಾಗೂ ಐಎನ್ಎಸ್ಎಎಸ್ ರೈಫಲ್ ದೊರೆತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಕೋಬ್ರಾ ಬೆಟಾಲಿಯನ್, ಪಲಾಮು ಪೊಲೀಸರು ಹಾಗೂ ಜಾರ್ಖಂಡ್ ಜಾಗ್ವಾರ್ ಪಡೆಗಳು ಜಂಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಜಾರ್ಖಂಡ್ನಲ್ಲಿ ಮಾವೋವಾದಿಗಳ ದಾಳಿಯಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ ಕೆಲವೇ ದಿನಗಳ ಬಳಿಕ ಈ ಎನ್ಕೌಂಟರ್ ನಡೆದಿದೆ.
ಸೆಪ್ಟೆಂಬರ್ 3ರಂದು ಮಾನಾಟುವಿನ ಕೇಡಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಟಿಎಸ್ಪಿಸಿ ಮಾವೋವಾದಿಗಳ ನಡುವೆ ನಡೆದ ಎನ್ಕೌಂಟರ್ ಕಾಳಗದಲ್ಲಿ ಪಲಾಮುವಿನ ಇಬ್ಬರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದರು. ಆ ದಾಳಿಯಲ್ಲಿ ಮುಖದೇವ್ ಯಾದವ್ ಶಾಮೀಲಾಗಿದ್ದನೆನ್ನಲಾಗಿದೆ. ಆ ಘಟನೆಯ ಆನಂತರ ಪೊಲೀಸರು ಪ್ರದೇಶದಲ್ಲಿ ಬೃಹತ್ ಕಾರ್ಯಾಚರಣೆಯನ್ನು ಆರಂಭಿಸಿದ್ದರು.







