ಜಾರ್ಖಂಡ್: ಗುಂಡಿನ ಕಾಳಗದಲ್ಲಿ ಮೂವರು ಶಂಕಿತ ಮಾವೋವಾದಿಗಳ ಹತ್ಯೆ

ಸಾಂದರ್ಭಿಕ ಚಿತ್ರ (PTI)
ರಾಂಚಿ, ಸೆ. 15: ಜಾರ್ಖಂಡ್ ನ ಹಝಾರಿಬಾಗ್ನ ಗಿರಿಹೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಸೋಮವಾರ ಬೆಳಗ್ಗೆ ಪೊಲೀಸರು ಹಾಗೂ ಶಂಕಿತ ಮಾವೋವಾದಿಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಶಂಕಿತ ಮಾವೋವಾದಿಗಳು ಸಾವನ್ನಪ್ಪಿದ್ದಾರೆ.
ಮೃತಪಟ್ಟ ಮೂವರು ಶಂಕಿತ ಮಾವೋವಾದಿಗಳಲ್ಲಿ ಓರ್ವನನ್ನು ಸಹದೇವ್ ಸೊರೇನ್ ಆಲಿಯಾಸ್ ಪರ್ವೇಶ್ ಎಂದು ಗುರುತಿಸಲಾಗಿದೆ.
ಈತ ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿಯ ಸದಸ್ಯ. ಈತನ ತಲೆಗೆ 1 ಕೋ. ರೂ. ಬಹುಮಾನ ಘೋಷಿಸಲಾಗಿತ್ತು. ಇನ್ನೋರ್ವನನ್ನು ರಘುನಾತ್ ಹೆಂಬ್ರೋಮ್ ಎಂದು ಗುರುತಿಸಲಾಗಿದೆ. ಈತ ಬಿಹಾರ್-ಜಾರ್ಖಂಡ್ ವಿಶೇಷ ಪ್ರದೇಶ ಸಮಿತಿ (ಎಸ್ಎಸಿ)ಯ ಸದಸ್ಯ. ಈತನ ತಲೆಗೆ 25 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಮತ್ತೋರ್ವ ಬಿರ್ಸೇನ್ ಗಂಝು ಆಲಿಯಾಸ್ ರಾಮ್ಖೇಲವನ್ ಎಂದು ಗುರುತಿಸಲಾಗಿದೆ. ಈತ ಸಿಪಿಐ (ಮಾವೋವಾದಿ) ಪ್ರಾದೇಶಿಕ ಸಮಿತಿಯ ಸದಸ್ಯ. ಈತನ ತಲೆಗೆ 10 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
‘‘ಗುಪ್ತಚರ ಮಾಹಿತಿ ಆಧಾರದಲ್ಲಿ ಕೋಬ್ರಾ ಬೆಟಾಲಿಯನ್, ಗಿರಿಧಿ ಹಾಗೂ ಹಝಾರಿಬಾಗ್ ಪೊಲೀಸ್ನ ಜಂಟಿ ತಂಡ ಇಂದು ಬೆಳಗ್ಗೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಈ ಸಂದರ್ಭ ನಡೆದ ಗುಂಡಿನ ಕಾಳಗದಲ್ಲಿ ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿ ಸದಸ್ಯ ಸಹದೇವ್ ಸೊರೇನ್ ಹಾಗೂ ಇತರ ಇಬ್ಬರು ಮಾವೋವಾದಿಗಳು ಮೃತಪಟ್ಟರು. ಸಹದೇವ್ ಸೊರೇನ್ ಹಾಗೂ ಇತರ ಇಬ್ಬರ ಮೃತದೇಹಗಳು ಗುಂಡಿನ ಕಾಳಗ ನಡೆದ ಸ್ಥಳದಲ್ಲಿ ಪತ್ತೆಯಾಯಿತು’’ ಎಂದು ಜಾರ್ಖಂಡ್ ಪೊಲೀಸರ ಹೇಳಿಕೆ ತಿಳಿಸಿದೆ.
ಈ ಮೂವರು ಶಂಕಿತ ಮಾವೋವಾದಿಗಳು ಜಾರ್ಖಂಡ್ ಹಾಗೂ ಬಿಹಾರ್ ನ ಗಡಿ ಪ್ರದೇಶಗಳಲ್ಲಿ ದೀರ್ಘ ಕಾಲದಿಂದ ಸಕ್ರಿಯರಾಗಿದ್ದರು. ಈ ಪ್ರದೇಶದಲ್ಲಿ ಹಲವು ಮಾವೋವಾದಿ ಘಟನೆಗಳಲ್ಲಿ ಭಾಗಿಯಾಗಿದ್ದರು ಪೊಲೀಸ್ ಮೂಲಗಳು ತಿಳಿಸಿವೆ.







