ಗುರುಗ್ರಾಮ: ಮದುವೆ ನಿರಾಕರಿಸಿದ್ದಕ್ಕೆ ಯುವತಿಯ ಹತ್ಯೆ; ಆರೋಪಿ ಮುಸ್ಲಿಂ ಎಂದು ಸುಳ್ಳು ವರದಿ ಪ್ರಕಟಿಸಿದ ಕನ್ನಡಪ್ರಭ

ಗುರುಗ್ರಾಮ: ಹಾಡಹಗಲೇ ಯುವಕನೊಬ್ಬ ಯುವತಿಯನ್ನು ಚಾಕುವಿನಿಂದ ಇರಿದು ಕೊಂದ ಆಘಾತಕಾರಿ ಕೊಲೆಯೊಂದು ಗುರುಗ್ರಾಮ್‌ನಲ್ಲಿ ಸೋಮವಾರ ನಡೆದಿದೆ. 19 ವರ್ಷ ವಯಸ್ಸಿನ ಯುವತಿಯನ್ನು ಆಕೆಯ ತಾಯಿ ಎದುರೇ ಆರೋಪಿ ಇರಿದು ಕೊಂದಿದ್ದು, ಯುವತಿಯ ತಾಯಿ ಆರೋಪಿಯನ್ನು ತಡೆಯಲು ಪ್ರಯತ್ನಿಸಿದ್ದರಾದರೂ ಅವರ ಪ್ರಯತ್ನಗಳು ವಿಫಲಗೊಂಡಿದೆ.
ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೃತ್ಯ ನಡೆದ ಸ್ಥಳದಲ್ಲಿದ್ದವರು ಯಾರೂ ಆರೋಪಿಯನ್ನು ತಡೆಯಲು ಮುಂದಾಗದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಆರೋಪಿ ರಾಜ್‌ಕುಮಾರ್ (23) ನನ್ನು ಸಂತ್ರಸ್ತೆಯ ಸಂಬಂಧಿಕರು ಹಿಡಿದು ಪಾಲಂ ವಿಹಾರ್ ಪೊಲೀಸರಿಗೆ ಒಪ್ಪಿಸಿದ್ದು, ಸಂತ್ರಸ್ತೆ ಆರೋಪಿಯನ್ನು ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಹತ್ಯೆಗೈಯಲಾಗಿದೆ ಎಂದು ಪ್ರಾಥಮಿಕ ತನಿಖೆಯ ವೇಳೆ ಬಹಿರಂಗಗೊಂಡಿದೆ.
ನಾಲ್ಕು ತಿಂಗಳ ಹಿಂದೆ ಇವರಿಬ್ಬರಿಗೆ ನಿಶ್ಚಿತಾರ್ಥವಾಗಿದ್ದು, ಕಾರಣಾಂತರಗಳಿಂದ ಕೆಲವು ದಿನಗಳ ಹಿಂದೆ ಮದುವೆಯನ್ನು ರದ್ದುಗೊಳಿಸಲಾಗಿತ್ತು ಎಂದು ವರದಿಗಳು ಹೇಳಿವೆ.
ಈ ನಡುವೆ, ಕೆಲವು ಮಾಧ್ಯಮಗಳು ಆರೋಪಿಯನ್ನು ಮುಸ್ಲಿಂ ವ್ಯಕ್ತಿ ಎಂದು ಪ್ರತಿಪಾದಿಸಿ ವರದಿ ಮಾಡಿದ್ದು, ಈ ಬಗ್ಗೆಯೂ ಆಕ್ಷೇಪಗಳು ವ್ಯಕ್ತವಾಗಿವೆ. ಕನ್ನಡ ದೈನಿಕ ಪತ್ರಿಕೆಯಾದ ಕನ್ನಡಪ್ರಭದಲ್ಲಿ “ಮದುವೆ ನಿರಾಕರಿಸಿದ್ದಕ್ಕೆ ಹಿಂದೂ ಯುವತಿಯ ಹತ್ಯೆ ಮಾಡಿದ ಮುಸ್ಲಿಂ ಯುವಕ” ಎಂಬ ಪ್ರಚೋದನಕಾರಿ ಶೀರ್ಷಿಕೆಯಡಿಯಲ್ಲಿ ವರದಿ ಮಾಡಿದೆ.
"ಅಪರಾಧಕ್ಕೆ ಬಳಸಿದ ಆಯುಧ, ಚಾಕು ಮತ್ತು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಸಂತ್ರಸ್ತೆಗೆ ಎರಡು ಬಾರಿ ಇರಿದಿದ್ದರಿಂದ ಅವಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ತೋರುತ್ತದೆ. ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಗುರುಗ್ರಾಮ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.







