ತನ್ನ ಸಂವಿಧಾನದಿಂದ ‘ಕಾಶ್ಮೀರ ವಿವಾದ’ ಕುರಿತ ಪ್ಯಾರಾ ತೆಗೆದ ಜಮ್ಮು-ಕಾಶ್ಮೀರ ಹೈಕೋರ್ಟ್ ವಕೀಲರ ಸಂಘ

Photo crredit: jkhighcourt.nic.in
ಶ್ರೀನಗರ: ಜಮ್ಮು-ಕಾಶ್ಮೀರ ಹೈಕೋರ್ಟ್ ವಕೀಲರ ಸಂಘ (ಜೆಕೆಎಚ್ಸಿಬಿಎ)ದ ಕಾಶ್ಮೀರ ಘಟಕವು ‘ಕಾಶ್ಮೀರ ವಿವಾದದ ಶಾಂತಿಯುತ ಇತ್ಯರ್ಥಕ್ಕಾಗಿ ಕೆಲಸ ಮಾಡಲು’ ಕರೆ ನೀಡಿದ್ದ ಪ್ಯಾರಾವನ್ನು ತೆಗೆದುಹಾಕಲು ತನ್ನ ಸಂವಿಧಾನಕ್ಕೆ ತಿದ್ದುಪಡಿಯನ್ನು ಮಾಡಿದೆ.
ವರದಿಯ ಪ್ರಕಾರ ಸಂಘವು ಈಗ ಸಾರ್ವತ್ರಿಕವಾಗಿ ಕಾನೂನು ವೃತ್ತಿಯ ಮತ್ತು ನಿರ್ದಿಷ್ಟವಾಗಿ ತನ್ನ ಸದಸ್ಯರ ಹಕ್ಕುಗಳನ್ನು ಹಾಗೂ ಹಿತಾಸಕ್ತಿಗಳನ್ನು ಉತ್ತೇಜಿಸಲು ಮಾತ್ರ ಕಾಳಜಿ ವಹಿಸಲಿದೆ. ಸಂಘವು ಸುಮಾರು 3,000 ಸದಸ್ಯರನ್ನು ಹೊಂದಿದೆ.
2020ರಲ್ಲಿ ಶ್ರೀನಗರ ಜಿಲ್ಲಾಧಿಕಾರಿಗಳು ಈಗ ತೆಗೆದುಹಾಕಲಾಗಿರುವ, ಸಂಘದ ಉದ್ದೇಶಗಳ ಕುರಿತ ಕಲಮ್ನಲ್ಲಿ ಸೇರಿಸಲಾಗಿದ್ದ ಪಠ್ಯದ ಕುರಿತು ವಿವರಣೆಯನ್ನು ಕೇಳಿದ್ದರು. ‘ಸಂಘವು ಕಾಶ್ಮೀರ ವಿವಾದದ ಶಾಂತಿಯುತ ಇತ್ಯರ್ಥ ಸೇರಿದಂತೆ ಸಾರ್ವಜನಿಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಮಾರ್ಗಗಳನ್ನು ಕಂಡುಕೊಳ್ಳುತ್ತದೆ ಮತ್ತು ಕ್ರಮಗಳನ್ನು ತೆಗೆದುಕೊಳ್ಳುತ್ತದೆ’ ಎಂದು ಈ ಪಠ್ಯದಲ್ಲಿ ಹೇಳಲಾಗಿತ್ತು.
ಜಮ್ಮು-ಕಾಶ್ಮೀರವು ದೇಶದ ಅವಿಭಾಜ್ಯ ಅಂಗವಾಗಿದೆ ಮತ್ತು ಅದು ವಿವಾದವಲ್ಲ ಎಂದು ಭಾರತದ ಸಂವಿಧಾನದಲ್ಲಿ ಹೇಳಲಾಗಿದ್ದು, ಈ ಪಠ್ಯವು ಅದಕ್ಕೆ ಅನುಗುಣವಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದರು.
ಜಮ್ಮು-ಕಾಶ್ಮೀರ ಲೆಫ್ಟಿನಂಟ್ ಗವರ್ನರ್ ಆಡಳಿತವು ಕಳೆದ ಐದು ವರ್ಷಗಳಲ್ಲಿ ಜೆಕೆಎಚ್ಸಿಬಿಎ ತನ್ನ ಸಾಂಸ್ಥಿಕ ಚುನಾವಣೆಗಳನ್ನು ನಡೆಸಲು ಅನುಮತಿಯನ್ನು ನಿರಾಕರಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಳಜಿ ಮತ್ತು ಕೋವಿಡ್ ಸಾಂಕ್ರಾಮಿಕ ಸೇರಿದಂತೆ ವಿವಿಧ ಕಾರಣಗಳಿಂದ ಚುನಾವಣೆಗೆ ಅನುಮತಿ ನೀಡಿರಲಿಲ್ಲ.
ಜೂನ್ನಲ್ಲಿ ಜಿಲ್ಲಾಧಿಕಾರಿಗಳು ಸಿಆರ್ಪಿಸಿಯ ಕಲಂ 144ರಡಿ ಜೆಕೆಎಚ್ಸಿಬಿಎ ಚುನಾವಣೆಗಳ ಮೇಲೆ ಹೊಸದಾಗಿ ನಿರ್ಬಂಧ ವಿಧಿಸಿದ್ದರು. ಸಂಘದ ಹಿಂದಿನ ಚಟುವಟಿಕೆಗಳು ‘ವಿಭಜನವಾದಿ ಸಿದ್ಧಾಂತ’ ವನ್ನು ಸೂಚಿಸುತ್ತವೆ ಎಂದು ಆರೋಪಿಸಲಾಗಿತ್ತು.
ಶುಕ್ರವಾರದ ತನ್ನ ಪತ್ರದಲ್ಲಿ ಇದಕ್ಕೆ ಪ್ರತಿಕ್ರಿಯಿಸುರುವ ಸಂಘವು‘ ಜೆಕೆಎಚ್ಸಿಬಿಎ ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದಷ್ಟೇ ಹಳೆಯದಾಗಿದೆ. ಈ ಅವಧಿಯಲ್ಲಿ ಅದರ ಸದಸ್ಯರು ಪರಸ್ಪರರ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದಾರೆ. ಸಂಘವು ಅಸ್ತಿತ್ವಕ್ಕೆ ಬಂದ ನೂರು ವರ್ಷಗಳ ಬಳಿಕ ಅದನ್ನು ದೂಷಿಸುವುದು ಮತ್ತು/ಅಥವಾ ಕಾನೂನುಬಾಹಿರ/ನೋಂದಣಿರಹಿತ ಎಂದು ಹೇಳುವುದು ಅತ್ಯಂತ ಅಸ್ವೀಕಾರಾರ್ಹವಾಗಿದೆ ’ ಎಂದು ಹೇಳಿದೆ.
ಸಂಘದ ಚುನಾವಣೆಯನ್ನು ಶಾಂತಿಯುತವಾಗಿ,ಮುಕ್ತವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಏಕೆ ಸಾಧ್ಯವಿಲ್ಲ ಎನ್ನುವುದಕ್ಕೆ ಯಾವುದೇ ಕಾರಣವಿಲ್ಲ ಎಂದೂ ಪತ್ರದಲ್ಲಿ ಪ್ರತಿಪಾದಿಸಲಾಗಿದೆ.







