ಸಿಬಿಎಫ್ಸಿ ಸೇರಿದಂತೆ ಕೇಂದ್ರೀಯ ಸಂಸ್ಥೆಗಳು ಬಿಜೆಪಿ ಕಚೇರಿಗಳಾಗುತ್ತಿವೆ : ಜಾನ್ ಬ್ರಿಟ್ಟಾಸ್ ಆರೋಪ

ಜಾನ್ ಬ್ರಿಟ್ಟಾಸ್ | Photo Credit : PTI
ತಿರುವನಂತಪುರಂ, ಮಾ. 8: ಕೇರಳ ಸ್ಟೋರಿ 2 ಎನ್ನುವುದು ‘‘ಶೌಚಾಲಯ ಗುಂಡಿಯ ಚಿತ್ರ’’ವಾಗಿದೆ ಹಾಗೂ ಕೇಂದ್ರೀಯ ಚಲನಚಿತ್ರ ಪ್ರಮಾಣಪತ್ರ ಮಂಡಳಿ (ಸಿಬಿಎಫ್ಸಿ) ಸೇರಿದಂತೆ ಭಾರತದ ಪ್ರಜಾಪ್ರಭುತ್ವದ ಸಂಸ್ಥೆಗಳು ಬಿಜೆಪಿಯ ಉಪ ಕಚೇರಿಗಳಾಗಿ ಪರಿವರ್ತನೆಯಾಗಿವೆ ಎಂದು ಸಿಪಿಎಮ್ ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಜಾನ್ ಬ್ರಿಟ್ಟಾಸ್, ಚಿತ್ರದ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದರು.
ಕೇರಳದಲ್ಲಿ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್ಡಿಎಫ್)ವು ದಾಖಲೆಯ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳುವುದು ಎಂಬುದಾಗಿಯೂ ಅವರು ಭವಿಷ್ಯ ನುಡಿದರು. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳನ್ನು ಟೀಕಿಸಿದ ಅವರು, ಅವುಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದರು.
ಕೇರಳದಲ್ಲಿ ವೈದ್ಯಕೀಯ ಕ್ಷೇತ್ರವು ದಿನಗಳೆದಂತೆ ಕಾರ್ಪೊರೇಟೀಕರಣವಾಗುತ್ತಿದೆ ಎಂಬುದಾಗಿ ಅವರು ಬಣ್ಣಿಸಿದರು.
ಹೆಚ್ಚುತ್ತಿರುವ ರಾಜಕೀಯ ಧ್ರುವೀಕರಣದಿಂದಾಗಿ ದೇಶದ ಹಲವು ಭಾಗಗಳಲ್ಲಿ ಎಡ ಪಕ್ಷಗಳು ಪ್ರಭಾವವನ್ನು ಕಳೆದುಕೊಂಡಿವೆ ಎಂದು ಅವರು ಅಭಿಪ್ರಾಯಪಟ್ಟರು. ಇದಕ್ಕೆ ಬಿಜೆಪಿ ಕಾರಣ ಎಂಬುದಾಗಿ ಅವರು ಬೆಟ್ಟು ಮಾಡಿದರು.





